ಚೇತೇಶ್ವರ ಪೂಜಾರ ಗೆ ಗಾಯ
ಚೆನ್ನೈ, ಫೆ.14- ಭಾರತ ತಂಡದ ಭರವಸೆಯ ಆಟಗಾರ ಚೇತೇಶ್ವರ ಪೂಜಾರ ಅವರು ಗಾಯಗೊಂಡಿರುವುದರಿಂದ ಫೀಲ್ಡಿಂಗ್ ವೇಳೆ ಮೈದಾನದಿಂದ ಹೊರಗುಳಿಯುವ ಮೂಲಕ ಆತಂಕ ಮೂಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೆ ಟೆಸ್ಟ್ನ ಮೊದಲ ದಿನದ ವೇಳೆ ಚೇತೇಶ್ವರ ಪೂಜಾರ ಅವರು ಕೈಬೆರಳಿಗೆ ಗಾಯ ಮಾಡಿಕೊಂಡಿದ್ದರು.
ಗಾಯದ ನಡುವೆಯೂ ಬ್ಯಾಟಿಂಗ್ ಮಾಡಿದ ಪೂಜಾರ 21 ರನ್ ಗಳಿಸಿ ಔಟಾದ ನಂತರ ವಿಶ್ರಾಂತಿ ಗೃಹದಲ್ಲೇ ಅವರು ಕಾಲ ಕಳೆದಿದ್ದರು. ಇಂದು ಬೆಳಗಿನ ಸೆಷನ್ನಲ್ಲೇ ಭಾರತ ಸರ್ವಪತನವಾದ ನಂತರ ಇಂಗ್ಲೆಂಡ್ ಬ್ಯಾಟಿಂಗ್ಗೆ ಆಗಮಿಸಿದಾಗ ಚೇತೇಶ್ವರ ಪೂಜಾರ ಅವರು ಮೈದಾನಕ್ಕಿಳಿಯದೆ ವಿಶ್ರಾಂತಿ ಪಡೆದರು.
ಚೆನ್ನೈ ಟೆಸ್ಟ್ ಅನ್ನು ಗೆಲ್ಲಲು ಪೂಜಾರ ಪಾತ್ರ ಮಹತ್ವ ಪಡೆದಿದ್ದು ಅವರ ಗಾಯದ ಸಮಸ್ಯೆಯ ಬಗ್ಗೆ ಚಿಂತೆ ಕಾಡುತ್ತಿದೆ. ಚೇತೇಶ್ವರ ಪೂಜಾರ ಒಂದು ವೇಳೆ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಇಳಿಯದೆ ಇದ್ದರೆ ಭಾರತ ತಂಡದ ಬ್ಯಾಟಿಂಗ್ ಮೇಲೆ ಪ್ರಭಾವ ಬೀಳುವ ಸಾಧ್ಯತೆಗಳಿವೆ.
ಗಾಯದ ಸಮಸ್ಯೆಯಿಂದ ಪೂಜಾರ ಮೈದಾನಕ್ಕಿಳಿಯದ ಕಾರಣ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಬದಲಿ ಆಟಗಾರನಾಗಿ ಕಣಕ್ಕಿಳಿದಿ ದ್ದಾರೆ.