ಜಮ್ಮು-ಕಾಶ್ಮೀರದಲ್ಲಿ ಛತ್ತೀಸ್‍ಗಢ ಮೂಲದ ಕಾರ್ಮಿಕನನ್ನ  ಹತ್ಯೆಗೈದ ಉಗ್ರರು

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಅ.16- ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಛತ್ತೀಸ್‍ಗಢ ಮೂಲದ ಕೂಲಿ ಕಾರ್ಮಿಕರೊಬ್ಬರನ್ನು ಉಗ್ರಗಾಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದಿದೆ.

ನಿರ್ಮಾಣ ಕಾರ್ಯ ಸಂಬಂಧ ಪುಲ್ವಾಮಾ ಜಿಲ್ಲೆಯ ಗ್ರಾಮವೊಂದರ ಬಳಿ ತೆರಳುತ್ತಿದ್ದ ಛತ್ತೀಸ್‍ಗಢ ಕೂಲಿ ಕಾರ್ಮಿಕನನ್ನು ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆಯಷ್ಟೆ ಕಾಶ್ಮೀರದಲ್ಲಿ ಸೇಬು ಕೊಂಡೊಯ್ಯುತ್ತಿದ್ದ ಟ್ರಕ್ ಅಡ್ಡಗಟ್ಟಿದ ಉಗ್ರರು ಚಾಲಕನನ್ನು ಹತ್ಯೆ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ಧತಿ ನಂತರ ಕಣಿವೆಯಾದ್ಯಂತ ಯೋಧರು ಮತ್ತು ಪೊಲೀಸರ ಸರ್ಪಗಾವಲು ಇದ್ದರೂ ಉಗ್ರರ ಅಟ್ಟಹಾಸ ಮುಂದುವರೆದಿದೆ.

ಯೋಧರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವುದು ಈಗ ಕಷ್ಟವಾಗಿರುವುದರಿಂದ ಮುಗ್ದ ನಾಗರೀಕರು , ವಾಹನ ಚಾಲಕರು ಮತ್ತು ಕೂಲಿ ಕಾರ್ಮಿಕರನ್ನು ಉಗ್ರರು ಬಲಿ ಪಡೆಯುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

Facebook Comments