ನಿರುದ್ಯೋಗದಿಂದ ವಿದ್ಯಾರ್ಥಿಗಳ ಆಕ್ರೋಶ ಸ್ಫೋಟ: ಚಿದಂಬರಂ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.14-ನಿರುದ್ಯೋಗ ಹೆಚ್ಚಾದರೆ, ಆರ್ಥಿಕತೆ ಸಂಪೂರ್ಣ ಕುಸಿತದಿಂದ ಯುವಕರು ಮತ್ತು ವಿದ್ಯಾರ್ಥಿಗಳ ಕೋಪ ಸ್ಫೋಟಗೊಳ್ಳಲಿದೆ ಎಂದು ಮಾಜಿ ಹಣಕಾಸು ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕತ್ವ ನೋಂದಣಿ ಅಭಿಯಾನದಿಂದ ದೇಶ ಪ್ರತಿಭಟನೆಗಳಿಂದ ಮುಳುಗಿಹೋಗಿದೆ. ಎರಡೂ ದೇಶಕ್ಕೆ ಅಪಾಯಕಾರಿ ಎಂಬುದನ್ನು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದು ದೂರಿದರು.  ಹಣದುಬ್ಬರವೂ ಕೂಡ ದೇಶ ಅತ್ಯಂತ ಅಪಾಯಕಾರಿ ಸೂಚಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಹೀಗೆ ನಿರುದ್ಯೋಗ ಸಮಸ್ಯೆ ಉಲ್ಭಣಗೊಳ್ಳುತ್ತಿದ್ದರೆ, ಆರ್ಥಿಕ ಕುಸಿತ ಮುಂದುವರೆಯುತ್ತಿದ್ದರೆ ಯುವಜನಾಂಗ ಮತ್ತು ವಿದ್ಯಾರ್ಥಿಗಳ ಕಿಚ್ಚು ಬೀದಿಗೆ ಬಂದು ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು 2018ರ ಡಿಸೆಂಬರ್‍ನಲ್ಲಿ ಶೇ 2.11 ಮತ್ತು 2019ರ ನವೆಂಬರ್‍ನಲ್ಲಿ ಶೇ 5.54 ರಷ್ಟಿತ್ತು. ಸಿಪಿಐ ಹಣದುಬ್ಬರವನ್ನು ಶೇಕಡಾ 7.39 ರೊಂದಿಗೆ ನರೇಂದ್ರ ಮೋದಿ ಸರ್ಕಾರ 2014ರ ಜುಲೈನಲ್ಲಿ ಪ್ರಾರಂಭಿಸಿತು. 2019ರ ಡಿಸೆಂಬರ್‍ನಲ್ಲಿ ಅದು ಶೇಕಡಾ 7.35 ರಷ್ಟಾಗಿದೆ ಎಂದು ಚಿದಂಬರಂ ಹೇಳಿದರು.

ಆಹಾರ ಹಣದುಬ್ಬರವು ಶೇಕಡಾ 14.12 ರಷ್ಟಿದೆ. ತರಕಾರಿ ಬೆಲೆಗಳು ಶೇಕಡಾ 60ರಷ್ಟು ಏರಿಕೆಯಾಗಿದೆ. ಈರುಳ್ಳಿ ಬೆಲೆ ಕೆ.ಜಿ.ಗೆ 100 ರೂ.ಗಿಂತ ಹೆಚ್ಚಾಗಿದೆ. ಇದು ಬಿಜೆಪಿ ಭರವಸೆ ನೀಡಿದ ಅಚೆ ದಿನ್ ಎಂದು ಚಿದಂಬರಂ ವ್ಯಂಗ್ಯವಾಡಿದರು.

Facebook Comments