ಉದ್ಧವ್ ಠಾಕ್ರೆ ಹೇಳಿಕೆ ಮೂರ್ಖತನದ್ದು : ಚಿದಾನಂದಮೂರ್ತಿ
ಬೆಂಗಳೂರು,ಜ.2- ಇತ್ತೀಚೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ಬೆಳಗಾವಿ ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಕೆಲಸ ಮಾಡಿಯೇ ಮಾಡುತ್ತೇವೆ ಎಂದು ಹೇಳಿರುವುದು ಮೂರ್ಖತನ ಎಂದು ನಾಡೋಜ ಡಾ.ಎಂ.ಚಿದಾನಂದಮೂರ್ತಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈಗಿನ ಮಹಾರಾಷ್ಟ್ರ ಸಾವಿರ ವರ್ಷಗಳ ಹಿಂದೆ ಕನ್ನಡ ಮಾತನಾಡುವ ಪ್ರದೇಶವೇ ಆಗಿತ್ತು. ಮಹಾರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ್ ತಿಲಕ್ ಅವರು ಬೆಳಗಾವಿ ಜಿಲ್ಲೆಯ ಗುರ್ಲಾ ಹೊಸೂರಿನಲ್ಲಿ ಮಾತನಾಡಿದಾಗ ಮರಾಠಿಗರು-ಕನ್ನಡಿಗರ ರಕ್ತ ಒಂದೇ, ಭಾಷೆ ಒಂದೇ, ಹಿಂದೆ ಇಡೀ ಮಹಾರಾಷ್ಟ್ರ ಕರ್ನಾಟಕವೇ ಆಗಿದಿತ್ತು ಎಂದು ಘೋಷಿಸಿದ್ದರೆಂದು ತಿಳಿಸಿದರು.
ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ನಾಡು ಇತ್ತು ಎಂಬ 9ನೇ ಶತಮಾನದ ಕವಿರಾಜ ಮಾರ್ಗದ ಉಲ್ಲೇಖ ಬಹಳಷ್ಟು ಪದಗಳು ಪುಷ್ಟಿ ನೀಡುತ್ತವೆ ಎಂದು ಹೇಳಿದ ಚಿದಾನಂದಮೂರ್ತಿ, ಉತ್ತರದಿಂದ ಬಂದ ಮರಾಠಿ ಭಾಷೆಯು 12ನೇ ಶತಮಾನದಿಂದೀಚೆಗೆ ಇಂದಿನ ಮಹಾರಾಷ್ಟ್ರದ ತುಂಬ ಪ್ರಚಾರಗೊಂಡು ಕನ್ನಡವನ್ನು ಹಿಂದಕ್ಕೆ ತಳ್ಳಿತ್ತು. ಮರಾಠಿ ಭಾಷೆಯ ಮೊದಲ ದಾಖಲೆ ದೊರೆತಿರುವುದು 12ನೇ ಶತಮಾನದಲ್ಲಿ.
ಕನ್ನಡದ ಮೊದಲ ಶಾಸನ ಕ್ರಿ.ಶ.450ರ ಹಲ್ಮಿಡಿ ಶಾಸನ ಎಂದು ವಿವರಿಸದರಲ್ಲದೆ ಮರಾಠಿ ಮತ್ತು ಮರಾಠಿಗರ ದಬಾವಣೆ ಹಿಂದಿನಿಂದ ನಡೆದುಕೊಂಡು ಬಂದಿದ್ದು ಇಂದಿಗೂ ಮುಂದುವರೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬ್ರಿಟಿಷರ ಕಾಲದ ಮುಂಬೈ ಸರ್ಕಾರ ಪ್ರಕಟಿಸಿರುವ ಶಾಲಾ ಪಠ್ಯ ಪುಸ್ತಕದಲ್ಲಿ ಕರ್ನಾಟಕ ನಕಾಶವು ಎಂಬ ನಕ್ಷೆಯಿದ್ದು(1909) ಅದರಲ್ಲಿ ಬೆಳಗಾವಿಯು ಕರ್ನಾಟಕ ಭಾಗವಾಗಿದೆ. ಕೊಲ್ಲಾಪುರ, ಸೊಲ್ಲಾಪುರಗಳು ಅದರಲ್ಲಿ ಸೇರಿವೆ ಎಂದು ಉಲ್ಲೇಖವಿದೆ.
ನಾವು ಶಾಂತಿಪ್ರಿಯರು. ಹಾಗೆಂದು ನಾಡಿನ ತಂಟೆಗೆ ಬಂದರೆ ನಾಡಿನ ತಂಟೆಗೆ ಬಂದರೆ ಸುಮ್ಮನಿರಲಾಗದು. ಇತ್ತೀಚೆಗೆ ಮುಂಬೈ, ಕೊಲ್ಲಾಪುರಗಳಲ್ಲಿ ಕನ್ನಡದ ಧ್ವಜಗಳನ್ನು ಸುಟ್ಟು ಹಾಕಿರುವುದು ಮೂರ್ಖತನದ ಪರಮಾವಧಿ ಎಂದು ಹೇಳಿದರು. ಕರ್ನಾಟಕ ಸರ್ಕಾರವು ಬೆಳಗಾವಿ ಬಗೆಗಿನ ತನ್ನ ನಿಲುವನ್ನು ಸ್ಪಷ್ಟಪಡಿಸಿ ಬೆಳಗಾವಿ ಎಂದೆಂದೂ ಕರ್ನಾಟಕದಲ್ಲಿಯೇ ಇರುತ್ತದೆ ಎಂಬ ದೃಢ ನಿರ್ಧಾರವನ್ನು ಘೋಷಿಸಿರುವುದು ಸ್ವಾಗತಾರ್ಹ ಎಂದರು.