‘ಬಡವರ ಬಂಧು’ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಿಎಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Sim-mMEeting---01

ಬೆಂಗಳೂರು, ನ.27-ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಬಡವರ ಬಂಧು ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು, ಅಧಿಕಾರಿಗಳು ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಬಡ್ಡಿಕೋರರಿಂದ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ 12 ಸಾವಿರ ರೂ. ಸಾಲ ನೀಡಿದ್ದ ಫೈನಾನ್ಸಿಯರ್ ಒಬ್ಬರು, ಆತನಿಂದ ಪ್ರತಿದಿನ 150 ರೂ. ವಸೂಲಿ ಮಾಡುತ್ತಿದ್ದ. ಇಂತಹ ಘಟನೆಗಳು ನಡೆಯದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಅಗತ್ಯ ಇರುವ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಒದಗಿಸಿಕೊಡಬೇಕು ಎಂದು ಸೂಚಿಸಿದರು.

ಸಾಲ ಮನ್ನಾ ಯೋಜನೆ ಜಾರಿಗೆ ಹಣದ ಕೊರತೆ ಇಲ್ಲ. ಇದಕ್ಕಾಗಿ ರಾಜ್ಯಮಟ್ಟದ ಸಮಿತಿ ಇದ್ದು, ಐಎಎಸ್ ಅಧಿಕಾರಿ ಇದರಲ್ಲಿರುತ್ತಾರೆ. ಅಧಿಕಾರಿಗಳು ಆದಷ್ಟು ಬೇಗ ಯೋಜನೆಯ ಲಾಭ ರೈತರಿಗೆ ದೊರಕುವಂತೆ ಮಾಡಬೇಕು ಎಂದು ಹೇಳಿದರು. ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪ, ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಸಂದರ್ಭದಲ್ಲಿ ಅಲ್ಲಿನ ಜಿಲ್ಲಾಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ.

ಅದೇ ರೀತಿ ಶಿವಮೊಗ್ಗ ಜಿಲ್ಲಾಧಿಕಾರಿ ರಾತ್ರಿ 12 ಗಂಟೆಗೆ ಪ್ರತಿಭಟನಾ ಸಭೆಗೆ ತೆರಳಿ ಅವರ ಸಮಸ್ಯೆ ಆಲಿಸಿದ್ದಾರೆ. ಇಂತಹ ಕೆಲಸಗಳಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು. ಒಂದು ವಾರದಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭಕ್ಕೆ ಸೂಚನೆ: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲು ಸರ್ಕಾರ ನಿರ್ಧರಿಸಿದ್ದು, ಒಂದು ವಾರದಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದು ಸಭೆಯಲ್ಲಿ ಮುಖ್ಯಮಂತ್ರಿ ಅಧಿಕಾರಿಗಳು ಸೂಚಿಸಿದ್ದಾರೆ.

Facebook Comments