ಸಿಎಂ ವಿಚಾರದಲ್ಲಿ ಯಾರು ತಿರುಕನ ಕನಸು ಕಾಣಬೇಡಿ : ಸಚಿವ ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.30- ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಚಿವ ಮುರುಗೇಶ್ ನಿರಾಣಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿರುವುದು ತಮಾಷೆಗಾಗಿ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ಮುಖ್ಯಮಂತ್ರಿ ಯಾರಾಗಬೇಕು. ರಾಜ್ಯದ ಚುಕ್ಕಾಣಿ ಯಾರು ಹಿಡಿಯಬೇಕು ಎಂಬುದನ್ನು ನಾಡಿನ ಜನ ತೀರ್ಮಾನಿಸುತ್ತಾರೆ ಎಂದರು.

ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಯಾರು ತಿರುಕನ ಕನಸು ಕಾಣುವುದು ಬೇಡ. ಬಿಸಿಲಿನ ಕುದುರೆಯ ಮೇಲೆ ಯಾರು ಹೋಗಬಾರದು ಎಂದು ನೀವು ಮುಖ್ಯಮಂತ್ರಿಯಾಗುವುದಿಲ್ಲವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಬಿಜೆಪಿ ನಾಯಕರು ಮಾಡಿದ ತೀರ್ಮಾನದಂತೆ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜನರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಅವರ ಧ್ವನಿಯಾಗಿ ಸ್ಪಂದಿಸಬೇಕು. ಒಳ್ಳೆಯ ರೀತಿ ಕೆಲಸ ಮಾಡಿ ಮುಖ್ಯಮಂತ್ರಿ ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾಗಿದೆ ಎಂದರು.

ಗಡಿ ಭಾಗದ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಓಮಿಕ್ರಾನ್ ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಸರ್ಕಾರ ಕೈಗೊಂಡಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಈ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ. ಸ್ವತಃ ಜಿಲ್ಲಾಕಾರಿಗಳು ನಿಗಾ ವಹಿಸುವಂತೆ ಸೂಚಿಸಲಾಗಿದೆ.

ಅದೇ ರೀತಿ ಕೇರಳದಿಂದ ಬರುವ ನರ್ಸಿಂಗ್ ವಿದ್ಯಾರ್ಥಿಗಳ ಮೇಲೂ ನಿಗಾ ವಹಿಸಿದ್ದು, ಸದ್ಯಕ್ಕೆ ರಾಜ್ಯದಲ್ಲಿ ಲಾಕ್‍ಡೌನ್ ಮಾಡುವಂತಹ ಕಠಿಣ ಪ್ರಸಂಗ ಎದುರಾಗಿಲ್ಲ ಎಂದರು.

ಈ ಹಿಂದಿನಂತೆ ಸೋಂಕು ಉಲ್ಬಣಿಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಸಹಜ ಸ್ಥಿತಿಗೆ ಮರಳುವವರೆಗೂ ಮಾಸ್ಕ್ ಬಳಸುವುದು ಕಡ್ಡಾಯವಾಗಿ ಮುಂದುವರೆಯಲಿದೆ. ಇದು ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲಾ ಸಭೆ, ಸಮಾರಂಭ ಹಾಗೂ ಮದುವೆಗಳಿಗೂ ಅನ್ವಯವಾಗಲಿದೆ ಎಂದು ಹೇಳಿದರು.

276.57 ಕೋಟಿ ರೂ. ಪರಿಹಾರ: ರಾಜ್ಯದಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದ ಸಾಕಷ್ಟು ಬೆಳೆ ಹಾನಿಯಾಗಿದ್ದು, ವರದಿ ಬಂದ ಕೂಡಲೇ ಪರಿಹಾರ ನೀಡಲು ಸೂಚಿಸಲಾಗಿದೆ. ಇದುವರೆಗೆ ಮೂರು ಲಕ್ಷ ರೈತರಿಗೆ 276.57 ಕೋಟಿ ರೂ. ಪರಿಹಾರ ನೀಡಲಾಗಿದೆ. 1.61 ಲಕ್ಷ ರೈತರಿಗೆ ಸಬ್ಸಿಡಿ ಸಹಿತ ಹಣವನ್ನು ಅವರ ಖಾತೆಗೆ ವರ್ಗಾಯಿಸಲಾಗಿದೆ. 4.61 ಲಕ್ಷ ರೈತರಿಗೆ 318.87 ಕೋಟಿ ರೂ. ವನ್ನು ಬಿಡುಗಡೆ ಮಾಡಲಾಗಿದೆ.

ಮಳೆ ಅನಾಹುತದ ಬಗ್ಗೆ ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗುವುದು. ರಸ್ತೆ, ವಿದ್ಯುತ್ ಕಂಬ , ಬೆಳೆ ಸೇರಿದಂತೆ ಆಗಿರುವ ಹಾನಿಯ ಬಗ್ಗೆ ವರದಿ ನೀಡಲಾಗುವುದು. ಜಿಲ್ಲಾಕಾರಿಗಳ ಪಿಡಿ ಖಾತೆಯಲ್ಲಿ ಹಣವಿದ್ದು ಸದ್ಯಕ್ಕೆ ಹಣದ ಕೊರತೆ ಎದುರಾಗಿಲ್ಲ ಎಂದರು.

Facebook Comments