ಆಡಳಿತ ಚುರುಕುಗೊಳಿಸಲು ಅಧಿಕಾರಿಗಳ ಸ್ಥಾನ ಪಲ್ಲಟ, ಸಿಎಸ್ ಸ್ಥಾನಕ್ಕೆ ರವಿಕುಮಾರ್ ಆಯ್ಕೆ ?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.25- ಆಡಳಿತ ವರ್ಗಕ್ಕೆ ಮೇಜರ್ ಸರ್ಜರಿ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಮುಂದಿನ ವಾರ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲು ತೀರ್ಮಾನಿಸಿದೆ.  ಜಿಡ್ಡುಗಟ್ಟಿರುವ ವ್ಯವಸ್ಥೆಗೆ ಹೊಸ ಸ್ವರೂಪ ಕೊಡಲು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೀರ್ಮಾನಿಸಿದ್ದು, ಆಯಾಕಟ್ಟಿನಲ್ಲಿರುವ ಪ್ರಮುಖ ಹುದ್ದೆಗಳನ್ನು ಬದಲಾಯಿಸಲಿದ್ದಾರೆ.

ಇದೇ 31ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಸೇವೆಯಿಂದ ನಿವೃತ್ತರಾಗಲಿದ್ದು, ತೆರವಾಗಿರುವ ಈ ಸ್ಥಾನಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ರವಿಕುಮಾರ್ ನೇಮಕವಾಗುವುದು ಬಹುತೇಕ ಖಚಿತವಾಗಿದೆ.

1984ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ರವಿಕುಮಾರ್ ಸೇವಾ ಹಿರಿತನದಲ್ಲಿ ಹಿರಿಯ ಅಧಿಕಾರಿಯಾಗಿರುವುದು, ಸಿಎಂ ಬಿಎಸ್‍ವೈ ಅವರ ಆಪ್ತ ವಲಯದಲ್ಲಿರುವುದರಿಂದ ಸಹಜವಾಗಿ ಮುಖ್ಯ ಕಾರ್ಯದರ್ಶಿ ಹುದ್ದೆ ಅವರಿಗೆ ಒಲಿಯಲಿದೆ.

ಟಿ.ಎನ್.ವಿಜಯಭಾಸ್ಕರ್ ತಮ್ಮ ಅವಧಿಯನ್ನು ಕೆಲ ತಿಂಗಳ ಮಟ್ಟಿಗೆ ಮುಂದುವರೆಸಬೇಕೆಂಬ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೆಲ ತಿಂಗಳ ಹಿಂದೆ ಗುಜರಾತ್‍ನಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದ  ಅಲ್ಲಿನ ಮುಖ್ಯ ಕಾರ್ಯದರ್ಶಿ ಅವಧಿಯನ್ನು ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು.  ಆದರೆ ಕೇಂದ್ರ ಗೃಹ ಇಲಾಖೆ ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು.

ಇದೀಗ ರಾಜ್ಯ ಸರ್ಕಾರ ಮತ್ತೆ ವಿಜಯ್ ಭಾಸ್ಕರ್ ಅವರನ್ನು ಮುಂದುವರೆಸುವಂತೆ ಕೇಂದ್ರಕ್ಕೆ ಮನವಿ ಮಾಡಿದರೆ ಮುಜುಗರಕ್ಕೆ ಸಿಲುಕಬಹುದೆಂಬ ಹಿನ್ನೆಲೆಯಲ್ಲಿ ರವಿಕುಮಾರ್ ಅವರನ್ನು ನೇಮಿಸಲು ತೀರ್ಮಾನಿಸಿದೆ. ಮುಖ್ಯ ಕಾರ್ಯದರ್ಶಿ ಹುದ್ದೆ ಮೇಲೆ ಕೆಲವು ಹಿರಿಯ ಐಎಎಸ್ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಅದರಲ್ಲೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ನಾಗಲಾಂಬಿಕೆ, ವಂದಿತಾ ಶರ್ಮ, ರಜನೀಶ್ ಗೋಯಲ್ ಮತ್ತಿತರರು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಪಿ.ರವಿಕುಮಾರ್ ಅವರು ಬಿಎಸ್‍ವೈಗೆ ಆಪ್ತರಾಗಿರುವುದರಿಂದ ಕೆಲವು ಅಧಿಕಾರಿಗಳು ಕೇಂದ್ರದಲ್ಲಿ ಗಾಡ್‍ಫಾದರ್‍ಗಳ ಮೊರೆ ಹೋಗಿದ್ದಾರೆ. ಆದರೆ ಕೆಲವು ಪ್ರಮುಖ ಹುದ್ದೆಗಳನ್ನು ಮುಖ್ಯಮಂತ್ರಿಗಳೇ ತೀರ್ಮಾನಿಸಬೇಕಾಗಿರುವುದರಿಂದ ಕೇಂದ್ರದ ಯಾವುದೇ ನಾಯಕರು ಮಧ್ಯಪ್ರವೇಶ ಮಾಡುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗುತ್ತಿದೆ.

ಇದೇ ರೀತಿ ಕೆಲವು ಹಿರಿಯ ಐಎಎಸ್ ಅಧಿಕಾರಿಗಳಿಗೂ ಮುಂಬಡ್ತಿ ಸಿಗಲಿದ್ದು, ಪ್ರಧಾನ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಪಡೆಯಲಿದ್ದಾರೆ. ಪ್ರಾದೇಶಿಕ ಆಯುಕ್ತರನ್ನು ಪ್ರಧಾನ ಕಾರ್ಯದರ್ಶಿಗಳ ಹುದ್ದೆಗೆ ವರ್ಗಾವಣೆಗೊಳಿಸಲು ಸರ್ಕಾರ ಸಿದ್ದತೆ ನಡೆಸಿದೆ.

ಪೊಲೀಸ್ ಇಲಾಖೆಯಲ್ಲೂ ಬದಲಾವಣೆ:
ಐಎಎಸ್ ಮಾತ್ರವಲ್ಲದೆ, ಐಪಿಎಸ್‍ನಲ್ಲೂ ಸರ್ಜರಿ ನಡೆಸಲು ಸಿಎಂ ಮುಂದಾಗಿದ್ದಾರೆ. ನಿರೀಕ್ಷೆಯಲ್ಲಿರುವ ಕೆಲವು ಹಿರಿಯ ಅಧಿಕಾರಿಗಳಿಗೆ ಮುಂಬಡ್ತಿ ಸೌಭಾಗ್ಯ ಸಿಗಲಿದೆ.ಹಾಲಿ ಕರ್ನಾಟಕ ಪೊಲೀಸ್ ಗೃಹ ಮಂಡಳಿಯ ಅಧ್ಯಕ್ಷ ಹಾಗೂ ಡಿಜಿಪಿ ಆಗಿರುವ 1987ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿ ಆರ್.ಪಿ.ಶರ್ಮ ಈ ತಿಂಗಳಾಂತ್ಯಕ್ಕೆ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

ಆರ್.ಪಿ.ಶರ್ಮ ಅವರಿಂದ ತೆರವಾಗಲಿರುವ ಈ ಸ್ಥಾನಕ್ಕೆ ಹಾಲಿ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ರವೀಂದ್ರನಾಥ್ ಮುಂಬಡ್ತಿ ಪಡೆಯಲಿದ್ದಾರೆ.ಕೆಲ ತಿಂಗಳ ಹಿಂದೆ ಪಿ.ರವೀಂದ್ರನಾಥ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದರು. ಕೊನೆಗೆ ಸರ್ಕಾರ ಮಧ್ಯಪ್ರವೇಶ ಮಾಡಿರುವುದರಿಂದ ತಮ್ಮ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದರು.

1989ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಪಿ.ರವೀಂದ್ರನಾಥ್ ಮುಂದಿನ ವಾರ ಡಿಜಿಪಿಯಾಗಿ ಮುಂಬಡ್ತಿ ಪಡೆಯಲಿದ್ದಾರೆ.  ಹಾಲಿ ಐಜಿಪಿಯಾಗಿರುವ ಕೆಲವು ಅಧಿಕಾರಿಗಳು ಎಡಿಜಿಪಿ ಹುದ್ದೆಗೆ ಮುಂಬಡ್ತಿ ಪಡೆಯುವರು. ಕೇಂದ್ರ ವಲಯದ ಐಜಿಪಿಯಾಗಿರುವ ಸೀಮಂತ್ ಕುಮಾರ್ ಸಿಂಗ್, ತರಬೇತಿ ವಿಭಾಗದ ಐಜಿಪಿ ಹರಿಶೇಖರನ್, ಬಿ.ಕೆ.ಸಿಂಗ್, ಮುಖ್ಯ ಕಚೇರಿಯಲ್ಲಿರುವ ಆರ್.ಯತೀಂದ್ರ ಸೇರಿದಂತೆ ಮತ್ತಿತರರಿಗೆ ಐಜಿಪಿಯಿಂದ ಎಡಿಜಿಪಿಗೆ ಮುಂಬಡ್ತಿ ನೀಡಲು ಸರ್ಕಾರ ತೀರ್ಮಾನಿಸಿದೆ.

ಸದ್ಯ ಬಿ.ಕೆ.ಸಿಂಗ್ ಅವರು ಕೇಂದ್ರ ಸೇವೆಯಲ್ಲಿದ್ದು, ಕೇಂದ್ರದ ಆಹಾರ ನಿಗಮ ಇಲಾಖೆಯಲ್ಲಿ ನಿರ್ದೇಶಕರಾಗಿದ್ದು, ಪುನಃ ರಾಜ್ಯ ಸೇವೆಗೆ ಹಿಂತಿರುಗಲಿದ್ದಾರೆ. ತರಬೇತಿ ವಿಭಾಗದ ಡಿಐಜಿ ಆಗಿರುವ ಪವಾರ್ ಅವರು ಐಜಿಪಿಯಾಗಿ ಮುಂಬಡ್ತಿ ಪಡೆಯುವ ಸಾಧ್ಯತೆಯಿದೆ. ಐಎಎಸ್, ಐಪಿಎಸ್‍ನಂತೆ ಐಎಸ್‍ಎಫ್ ಹಾಗೂ ಕೆಎಎಸ್‍ನಲ್ಲೂ ಬದಲಾವಣೆಯಾಗುವ ಸಾಧ್ಯತೆಯಿದೆ. ಆಯಾಕಟ್ಟಿನಲ್ಲಿರುವ ಕೆಲವು ಪ್ರಮುಖ ಇಲಾಖೆಯ ಅಧಿಕಾರಿಗಳು ಎತ್ತಂಗಡಿಯಾಗಲಿದ್ದಾರೆ.

ಮುಖ್ಯವಾಗಿ ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಇಂಧನ, ಬಿಡಿಎ, ಅಬಕಾರಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಉನ್ನತಶಿಕ್ಷಣ ವೈದ್ಯಕೀಯ ಶಿಕ್ಷಣ, ಕಂದಾಯ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳಾಗಲಿವೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ. ಈಗಾಗಲೇ ಪಟ್ಟಿ ಸಿದ್ದವಾಗಿದ್ದು, ಹೊಸವರ್ಷದ ಸಂದರ್ಭದಲ್ಲೇ ಆಡಳಿತದಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ ಎಂದು ತಿಳಿದುಬಂದಿದೆ.

Facebook Comments