ಬಿಇ ವಿದ್ಯಾರ್ಥಿನಿಯ ಜೀವ ಬಲಿ ಪಡೆದ ರಸ್ತೆಗುಂಡಿ ಮುಚ್ಚುವಂತೆ ವ್ಯಂಗ್ಯ ಚಿತ್ರಗಳ ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ನ.5- ನಗರದ ಕೆಎಂ ರಸ್ತೆಯಲ್ಲಿದ್ದ ಗುಂಡಿಯಿಂದ ಬಿಇ ವಿದ್ಯಾರ್ಥಿನಿ ಸಿಂಧುಜಾ ಸಾವನ್ನಪ್ಪಿದ ನಂತರ ರಸ್ತೆ ಗುಂಡಿ ಮುಚ್ಚಿ ಜೀವ ಉಳಿಸಿ ಎಂಬ ಘೋಷಣೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಚಿತ್ರಗಳು ಭಾರೀ ಸದ್ದು ಮಾಡುತ್ತಿವೆ.

ಬಿಇ ಪೂರ್ಣಗೊಳಿಸಿ ಪಾಸ್‌ಪೋರ್ಟ್ ಪರಿಶೀಲನೆಗಾಗಿ ತಂದೆ ಜತೆ ಸಿಂಧುಜಾ ನಗರಠಾಣೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಕೆಎಂ ರಸ್ತೆಯಲ್ಲಿ ದ್ವಿಚಕ್ರ ವಾಹನ ಗುಂಡಿಯಲ್ಲಿ ಸಿಕ್ಕಿಕೊಂಡು ಆಯತಪ್ಪಿ ಕೆಳಗೆ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಇನ್ನೆಷ್ಟು ಸಾವು-ನೋವು ಸಂಭವಿಸುತ್ತವೆಯೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗುಂಡಿಗಳನ್ನು ಮುಚ್ಚಿ ಎಂಬ ವ್ಯಂಗ್ಯಚಿತ್ರಗಳು ಹರಿದಾಡುತ್ತಿವೆ.

ನ.1ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಸಂಜೆ ಪತ್ರಿಕೆ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವಂತೆ ಗಮನ ಸೆಳೆದಿತ್ತು. ಅದಕ್ಕೆ ಉತ್ತರಿಸಿದ ಸಚಿವರು, ಶೀಘ್ರದಲ್ಲೇ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಅಷ್ಟರೊಳಗೆ ವಿದ್ಯಾರ್ಥಿನಿಯ ಜೀವ ರಸ್ತೆ ಗುಂಡಿಗೆ ಬಲಿಯಾಗಿತ್ತು. ಒಂದು ವೇಳೆ ತುರ್ತಾಗಿ ಗುಂಡಿ ಮುಚ್ಚಿದ್ದರೆ ವಿದ್ಯಾರ್ಥಿನಿಯ ಜೀವ ಉಳಿಯುತ್ತಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ನಗರದ ಜನ ವಾಟ್ಸಾಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಗುಂಡಿಯ ಪಕ್ಕದಲ್ಲಿ ಮಲಗಿ ಜೀವ ಉಳಿಸಿ ಎಂದು ಬರೆದ ಚಿತ್ರಗಳು ಹರಿದಾಡುತ್ತಿವೆ. ಇದಕ್ಕೆ ಬರುತ್ತಿರುವ ಟೀಕೆಗಳಿಗೆ ಸ್ಪಂದಿಸುತ್ತ ಒಂದು ರೀತಿ ರಸ್ತೆ ಸರಿಪಡಿಸಿ ಎಂಬ ಅಭಿಯಾನವೇ ಜಿಲ್ಲೆಯಲ್ಲಿ ಆರಂಭವಾಗಿದೆ.

Facebook Comments