ಮೊಯ್ಲಿ-ಬಚ್ಚೇಗೌಡ ನಡುವೆ ಬಿಗ್ ಫೈಟ್ : ಯಾರಿಗೆ ಒಲಿಯಲಿದೆ ಚಿಕ್ಕಬಳ್ಳಾಪುರ..?

ಈ ಸುದ್ದಿಯನ್ನು ಶೇರ್ ಮಾಡಿ

ರಾಜಧಾನಿಯ ಸೆರಗಿನಲ್ಲೇ ಇರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರ ನಡುವೆ ಸಮ ಬಲದ ಹೋರಾಟ ನಿರೀಕ್ಷೆ ಮಾಡಲಾಗಿದೆ.ಕ್ಷೇತ್ರ ಪುನರ್ ವಿಂಗಡಣೆ ನಂತರ ಲೋಕಸಭಾ ಕ್ಷೇತ್ರವಾಗಿ ಪರಿವರ್ತನೆಗೊಂಡ ಚಿಕ್ಕಬಳ್ಳಾಪುರಕ್ಕೆ ನಡೆದ ಎರಡು ಸಂಸತ್ ಚುನಾವಣೆಯಲ್ಲೂ ಇಲ್ಲಿನ ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದಾರೆ.

ಒಕ್ಕಲಿಗ ಮತ್ತು ದಲಿತ ಮತಗಳೇ ನಿರ್ಣಾಯಕರಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಳೆದ ಎರಡು ಬಾರಿ ಗೆಲುವು ಸಾಧಿಸಿದ್ದ ವೀರಪ್ಪ ಮೊಯ್ಲಿ ಹ್ಯಾಟ್ರಿಕ್ ಸಾಧನೆಯತ್ತ ಕಣ್ಣು ನೆಟ್ಟಿದ್ದಾರೆ.

ಮೋದಿ ಅವರ ಹ್ಯಾಟ್ರಿಕ್ ಸಾಧನೆಗೆ ಅವಕಾಶ ನೀಡಬಾರದು ಎಂದು ಹಠಕ್ಕೆ ಬಿದ್ದಿರುವ ಬಿಜೆಪಿ ಈ ಬಾರಿ ಪ್ರಭಾವಿ ಒಕ್ಕಲಿಗ ಮುಖಂಡರಾಗಿರುವ ಬಿ.ಎನ್.ಬಚ್ಚೇಗೌಡ ಅವರಿಗೆ ಟಿಕೆಟ್ ನೀಡುವ ಮೂಲಕ ಗೆಲುವು ದಕ್ಕಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದೆ. ಕಳೆದ ಬಾರಿ ಈ ಕ್ಷೇತ್ರದಿಂದ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಜೆಡಿಎಸ್ ಅಭ್ಯರ್ಥಿಯಾಗಿದ್ದರೂ ಮೊಯ್ಲಿ ಮತ್ತು ಬಚ್ಚೇಗೌಡರ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿತ್ತು.

ಮೊಯ್ಲಿ ವಿರುದ್ಧ ಬಚ್ಚೇಗೌಡರು ಕೇವಲ 9,520 ಮತಗಳಿಂದ ವಿರೋಚಿತ ಸೋಲನ್ನಪ್ಪಿದರೆ, ಕುಮಾರಸ್ವಾಮಿ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.
ಈ ಬಾರಿ ಮೊಯ್ಲಿ ವಿರುದ್ಧ ಮೈತ್ರಿ ಪಕ್ಷ ಜೆಡಿಎಸ್‍ನ ಕೆಲ ಮುಖಂಡರು ತಿರುಗಿ ಬಿದ್ದಿದ್ದಾರೆ.

ಜೆಡಿಎಸ್ ಪ್ರಾಬಲ್ಯವಿರುವ ಬಯಲು ಸೀಮೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡಿದರೆ ಭವಿಷ್ಯದಲ್ಲಿ ಪಕ್ಷ ನೆಲೆ ಕಳೆದುಕೊಳ್ಳ ಬೇಕಾಗುತ್ತದೆ ಎಂದು ಕೆಲ ಮುಖಂಡರು ದೂರು ನೀಡಿದ್ದಾರೆ.

ಬಯಲು ಸೀಮೆಯಲ್ಲಿ ಬಿಜೆಪಿಗೆ ಹೇಳಿಕೊಳ್ಳು ವಂತಹ ವರ್ಚಸ್ಸಿಲ್ಲದಿದ್ದರೂ ಬಚ್ಚೇಗೌಡರು ಕೇಸರಿ ಅಭ್ಯರ್ಥಿಯಾಗು ತ್ತಿದ್ದಂತೆ ಬಿಜೆಪಿ ಕಾರ್ಯ ಕರ್ತರಲ್ಲಿ ಹುಮ್ಮಸ್ಸು ಕಂಡು ಬಂದಿದೆ.ಕಳೆದ ಬಾರಿ ಬೆರಳೆಣಿಕೆ ಅಂತರದಿಂದ ಸೋಲನ್ನು ಅನುಭವಿಸಿದ್ದ ಬಚ್ಚೇಗೌಡರ ಪರ ಕ್ಷೇತ್ರದಾದ್ಯಂತ ಉತ್ತಮ ವಾತಾವರಣ ಕಂಡು ಬರುತ್ತಿದ್ದು , ಈ ಬಾರಿಯೂ ಜಿದ್ದಾಜಿದ್ದಿನ ಹೋರಾಟ ಶತ ಸಿದ್ಧ.

ಕ್ಷೇತ್ರ ಪರಿಚಯ :  ಯಾವುದೇ ನದಿ ಮೂಲ ಇಲ್ಲದೆ ಶಾಶ್ವತ ಬರ ಪೀಡಿತ ಪ್ರದೇಶವೆಂದೇ ಗುರುತಿಸಿ ಕೊಂಡಿರುವ ಚಿಕ್ಕಬಳ್ಳಾಪುರ ಕ್ಷೇತ್ರ ತೆಲುಗು ಪ್ರಭಾವಕ್ಕೆ ಒಳಗಾಗಿರುವ ಪ್ರದೇಶ. ಅವಿಭಜಿತ ಕೋಲಾರ ಜಿಲ್ಲೆಯ  ಭಾಗವಾಗಿದ್ದ ಚಿಕ್ಕಬಳ್ಳಾಪುರ ಇದೀಗ ಜಿಲ್ಲಾ ಕೇಂದ್ರವಾಗಿ ಮಾರ್ಪಟ್ಟಿದೆ.

ಜಿಲ್ಲೆಯಾಗಿ ಮಾರ್ಪಟ್ಟರೂ ನೀರಿನ ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ಈ ಭಾಗದ ಜನರು ನೀರಾವರಿ ಹೋರಾಟಕ್ಕೆ ಧುಮುಕಿದ್ದಾರೆ. ಹೋರಾಟಗಾರರ ಪರವಾಗಿ ಸರ್ಕಾರ ಎತ್ತಿನ ಹೊಳೆ , ಎಚ್.ಎನ್.ವ್ಯಾಲಿ ಸೇರಿದಂತೆ ಹಲವಾರು ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದೆ.

ಎತ್ತಿನ ಹೊಳೆ ಮತ್ತು ಎಚ್‍ಎನ್ ವ್ಯಾಲಿ ಕಾಮಗಾರಿಗೆ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು , ಈ ಯೋಜನೆಗಳನ್ನು ಕೇವಲ ಹಣ ಹೊಡೆಯುವ ಉದ್ದೇಶದಿಂದ ಕೈಗೆತ್ತಿ ಕೊಳ್ಳಲಾಗಿದೆ. ಇದರಿಂದ ನಮಗೆ ಯಾವುದೇ ಲಾಭವಿಲ್ಲ ಎನ್ನುತ್ತಿದ್ದಾರೆ.ಹೀಗಾಗಿ 2019ರ ಚುನಾವಣಾ ಫಲಿತಾಂಶದ ಮೇಲೆ ಈ ಅಂಶ ಪ್ರಭಾವ ಬೀರಲಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ
ಸಂಸದ: ಎಂ.ವೀರಪ್ಪ ಮೊಯ್ಲಿ. (ಎರಡನೆ ಬಾರಿಗೆ)
ವಿಧಾನಸಭಾ ಕ್ಷೇತ್ರಗಳು :  ಗೌರಿಬಿದನೂರು, ಬಾಗೇಪಲ್ಲಿ , ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.  ನೆಲಮಂಗಲ ಮತ್ತು ದೇವನಹಳ್ಳಿಯಲ್ಲಿ ಜೆಡಿಎಸ್ ಶಾಸಕರಿದ್ದರೆ , ಯಲಹಂಕದಲ್ಲಿ ಮಾತ್ರ ಓರ್ವ ಬಿಜೆಪಿ ಶಾಸಕರಿದ್ದಾರೆ.

ಒಟ್ಟು ಮತದಾರರು :  17,09,096.
ಮಹಿಳೆಯರು: 8,43,897, ಪುರುಷರು: 8,65,199, ತೃತೀಯ ಲಿಂಗಿಗಳು: 135
ಜಾತಿವಾರು ಲೆಕ್ಕಾಚಾರ : ಒಕ್ಕಲಿಗರು: 06,13,360, ದಲಿತರು: 05,22,000, ಹಿಂದುಳಿದ ವರ್ಗ: 01,25,000, ಬಲಿಜರು: 85,000, ಕುರುಬರು: 42,000, ಇತರೆ: 01,87,200, ಮುಸ್ಲಿಮರು:01,28,000, ಉತ್ತರ ಭಾರತೀಯರು: 10,000.

Facebook Comments