ಕೋರ್ಟ್ ಅಟೆಂಡರ್ ಕೊಲೆಗೆ ವಕೀಲನಿಂದ ಸುಪಾರಿ, ಬಯಲಾಯ್ತು ಟ್ರಯಾಂಗಲ್ ಲವ್ ಸ್ಟೋರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಸೆ.15- ಕೋರ್ಟ್ ಅಟೆಂಡರ್ ನವೀನ್ ಹತ್ಯೆಗೆ ತ್ರಿಕೋನ ಪ್ರೇಮ ಪ್ರಕರಣವೇ ಕಾರಣ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಜಿಲ್ಲಾಸ್ಪತ್ರೆಯ ಟೈಪಿಸ್ಟ್ ದೀಪಾ (35), ಚಿಕ್ಕಬಳ್ಳಾಪುರ ತಾಲ್ಲೂಕು ನಲ್ಲಕದಿರೇನಹಳ್ಳಿಯ ಹೈಕೋರ್ಟ್ ವಕೀಲ ನವೀನ್ (42), ಅನಿಲ್ (39) ಹಾಗೂ ಕೃಷ್ಣಮೂರ್ತಿ (41) ಎಂಬುವರೇ ಕೊಲೆ ಆರೋಪಿಗಳಾಗಿದ್ದಾರೆ.

ಕಳೆದ 20 ದಿನಗಳ ಹಿಂದೆ ಅಟೆಂಡರ್ ನವೀನ್ ಅವರ ಕೊಲೆಯಾಗಿತ್ತು. ಈ ಕೊಲೆ ಜಾಡು ಹಿಡಿದ ಪೊಲೀಸರು ಹೈಕೋರ್ಟ್ ವಕೀಲ ಸೇರಿದಂತೆ ನಾಲ್ವರಿಗೆ ಎಡೆಮುರಿ ಕಟ್ಟಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಟೈಪಿಸ್ಟ್ ಆಗಿದ್ದ ದೀಪಾ ಮತ್ತು ವಕೀಲ ನವೀನ್ ನಡುವೆ ಪ್ರೇಮಾಂಕುರವಾಗಿತ್ತು. ಆದರೆ, ದೀಪಾಳಿಗೆ ಮದುವೆಯಾಗಿ ಗಂಡನಿದ್ದು, ಆತನ ಜತೆಗೆ ಮತ್ತೊಬ್ಬ ಪ್ರಿಯಕರನಿದ್ದಾನೆ ಎಂಬ ಅಂಶ ನವೀನ್‍ಗೆ ತಡವಾಗಿ ತಿಳಿದುಬಂದಿತ್ತು.

ದೀಪಾ ಮತ್ತು ವಕೀಲನ ನಡುವಿನ ಪ್ರೇಮ ವಿಚಾರ ತಿಳಿದ ಮತ್ತೊಬ್ಬ ಪ್ರಿಯಕರ ನವೀನ್ ದೀಪಾಳಿಗೆ ನೀಡಿದ್ದ ಹಣ ವಾಪಸ್ ಕೊಡುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಈ ವಿಷಯವನ್ನು ದೀಪಾ ವಕೀಲ ನವೀನ್‍ಗೆ ತಿಳಿಸಿದ್ದಳು. ಹೀಗಾಗಿ ವಕೀಲ ಹಳೆ ಪ್ರಿಯಕರ ನವೀನ್‍ನನ್ನು ಕರೆದು ಆಕೆಯ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿದ್ದ.

ಆದರೂ ಅಟೆಂಡರ್ ನವೀನ್ ದೀಪಾಳನ್ನು ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದುದನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ವಕೀಲ ನವೀನ್ ತನ್ನ ಸಹಚರರಾದ ಅನಿಲ್ ಮತ್ತು ಕೃಷ್ಣಮೂರ್ತಿಗೆ ಸುಪಾರಿ ನೀಡಿದ್ದ. ಸುಪಾರಿ ಪಡೆದ ಹಂತಕರು ಪ್ರಶಾಂತ್‍ನಗರದ ಮನೆಯೊಂದರಲ್ಲಿ ಬಾಡಿಗೆಗಿದ್ದ ಅಟೆಂಡರ್ ನವೀನ್‍ನ ರೂಮ್‍ಗೆ ನುಗ್ಗಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಚಿಕ್ಕಬಳ್ಳಾಪುರ ಪೊಲೀಸರು ಕೊಲೆ ಆರೋಪಿಗಳಿಗೆ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin