ಬ್ಯಾನರ್‌ನಲ್ಲಿ ಭಾವಚಿತ್ರವಿಲ್ಲದಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು,ನ.19-ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಮಾರಂಭಕ್ಕಾಗಿ ಹಾಕಲಾಗಿದ್ದ ಬ್ಯಾನರ್, ಬಂಟಿಂಗ್ಸ್ , ಫೋಸ್ಟರ್‍ಗಳಲ್ಲಿ ಮುಖಂಡರ ಭಾವಚಿತ್ರ, ಹೆಸರಿಲ್ಲ ಎಂಬ ಕಾರಣಕ್ಕೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ನಂತರ ಮಧ್ಯಪ್ರವೇಶಿಸಿದ ನಾಯಕರು ಸಮಾಧಾನಪಡಿಸಿದ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ನೂತನ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಅವರ ಪದಗ್ರಹಣ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಇದರ ಅಂಗವಾಗಿ ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ಸರ್ಕಲ್, ವಿಜಯಪುರ ರಸ್ತೆಗಳಲ್ಲಿ ಹಾಕಲಾಗಿದ್ದ ಬ್ಯಾನರ್ಸ್, ಫೋಸ್ಟರ್‍ಗಳಲ್ಲಿ ತಮ್ಮ ಭಾವಚಿತ್ರ ಹಾಕದಿರುವುದರಿಂದ ಆಕ್ರೋಶಗೊಂಡ ಕಾಂಗ್ರೆಸ್‍ನ ಕಾರ್ಮಿಕ ಸಂಘಟನೆ ಮುಖಂಡ ರಸೂಲ್ ಖಾನ್ ಹಾಗೂ ಇನ್ನಿತರರಾದ ರಾಹಿಲ್ ಅಕ್ಮಲ್, ಮೂರ್ತಿ ಮತ್ತಿತರರು ಗಲಾಟೆ ಆರಂಭಿಸಿದ್ದರು.

ಒಂದು ಹಂತದಲ್ಲಿ ಬ್ಯಾನರ್ಸ್ ಫೋಸ್ಟರ್‍ಗಳನ್ನು ಮಾಡಿಸುವ ಜವಾಬ್ದಾರಿ ಹೊತ್ತವರ ವಿರುದ್ದ ಹರಿಹಾಯ್ದು ಅವರ ಕೊರಳಪಟ್ಟಿ ಹಿಡಿದು ಜಗಳವಾಡಿದ ಘಟನೆ ನಡೆದಿದೆ.
ಮುಸ್ಲಿಮರ ವೋಟು ಬೇಕು, ಮುಖಂಡರ ಫೋಟೋ ಬೇಡ ಎಂದು ನಡುರಸ್ತೆಯಲ್ಲೇ ವಾಗ್ವಾದ ನಡೆದಿದೆ. ಈ ವೇಳೆ ಕೆಲ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್‍ನಲ್ಲಿ ಭುಗಿಲೆದ್ದ ಭಿನ್ನಮತ:
ಜಿಲ್ಲಾ ಕಾಂಗ್ರೆಸ್‍ನಲ್ಲಿ ಇಂದು ಫೋಟೊ ವಿಚಾರಕ್ಕಾಗಿ ಭಿನ್ನಮತ ಸ್ಪೋಟಗೊಂಡಿದೆ. ಕಾರ್ಯಕ್ರಮಕ್ಕೂ ಮುನ್ನವೇ ಅಸಮಾಧಾನ ಉಲ್ಬಣಗೊಂಡು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತು.  ಇಂದಿನ ಕಾರ್ಯಕ್ರಮ ನಿಮಿತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಗಮಿಸುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ.

Facebook Comments