ಬಿಜೆಪಿ ಮುಖಂಡ ಅನ್ವರ್ ಕೊಲೆ, ಕಾಫಿ ನಾಡು ಪ್ರಕ್ಷುಬ್ಧ

ಈ ಸುದ್ದಿಯನ್ನು ಶೇರ್ ಮಾಡಿ

anwar-1

ಚಿಕ್ಕಮಗಳೂರು,ಜೂ.23- ಬಿಜೆಪಿ ಮುಖಂಡ ಅನ್ವರ್ ಹತ್ಯೆ ಹಿನ್ನೆಲೆಯಲ್ಲಿ ಕಾಫಿ ನಾಡು ಪ್ರಕ್ಷುಬ್ಧಗೊಂಡಿದೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾ ಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಸವನಹಳ್ಳಿ ಠಾಣೆ ಪೊಲೀಸರು ಅನ್ವರ್ ಕೊಲೆ ಪ್ರಕರಣದಲ್ಲಿ ಯಸೋಫ್ ಆಝೀ, ಆಸೀಫ್ ಸೇರಿದಂತೆ ಐದು ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

ಇಂದು ಬೆಳಗ್ಗೆ ಶಾಸಕ ಸಿ.ಟಿ.ರವಿ ಅವರು ಜಿಲ್ಲಾಸ್ಪತ್ರೆ ಬಳಿ ತೆರಳಿ ಅನ್ವರ್ ಅವರ ಸಹೋದರ ಕಬೀರ್ ಹಾಗೂ ಕುಟುಂಬದವರನ್ನು ಸಂತೈಸಿ, ಅನ್ವರ್ ಸ್ನೇಹಿಮಯಿ ವ್ಯಕ್ತಿಯಾಗಿದ್ದರು. ಪಕ್ಷಕ್ಕೆ ಹಾಗೂ ನನಗೆ ವೈಯಕ್ತಿಕವಾಗಿ ಬಹಳ ನೋವನ್ನುಂಟು ಮಾಡಿದೆ ಎಂದು ಕಣ್ಣೀರಿಟ್ಟರು.ವೈಯಕ್ತಿಕ ದ್ವೇಷ ಏನಿದ್ದರೂ ಎದುರಿಸಿ ಜಯಿಸಬೇಕೆ ವಿನಃ ಹಿಂಬಾಲಿನಿಂದ ಬಂದು ಸಾಯಿಸುವ ಮಟ್ಟಕ್ಕೆ ಇಳಿಯಬಾರದು ಎಂದು ಹೇಳಿದರು. ಆರೋಪಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ಕೂಡಲೇ ಅವರನ್ನು ಬಂಧಿಸಬೇಕು.

ಅನ್ವರ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಶೋಕ ವ್ಯಕ್ತಪಡಿಸಿದರು. ಬಿಜೆಪಿಯ ಜಿಲ್ಲಾ ವಕ್ತಾರ ಎಚ್.ಡಿ.ತಮ್ಮಯ್ಯ, ವರಸಿದ್ದಿ ವೇಣುಗೋಪಾಲ್ ಮತ್ತಿತರ ಮುಖಂಡರು ಆಸ್ಪತ್ರೆ ಬಳಿ ತೆರಳಿ ಕುಟುಂಬದವರನ್ನು ಸಂತೈಸಿದರು. ಬಂಧನಕ್ಕೆ ಆಗ್ರಹ: ಅನ್ವರ್ ಹತ್ಯೆ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಶವಗಾರದ ಬಳಿ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಸಂಬಂಧಿಕರು, ಹಿತೈಷಿಗಳು ಜಮಾಯಿಸಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದರು.ಅನ್ವರ್ ಜಾತ್ಯತೀತ ಮನೋಭಾವ ವ್ಯಕ್ತಿಯಾಗಿದ್ದು, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಇವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಹಿನ್ನೆಲೆ: ನಗರದ ಗೌರಿ ಕಾಲುವೆ ಬಡಾವಣೆಯ ಗುಡ್ ಮಾರ್ನಿಂಗ್ ಶಾಪ್ ಹಿಂಭಾಗದ ರಸ್ತೆಯಲ್ಲಿ ರಾತ್ರಿ 9.35ರ ಸಮಯದಲ್ಲಿ ಕಾರಿನಿಂದ ಮೊಹಮ್ಮದ್ ಅನ್ವರ್ ಇಳಿಯುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ಹಂತಕರು ತಲ್ವಾರ್‍ನಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಇಬ್ಬರು ದುಷ್ಕರ್ಮಿಗಳು ಬೈಕ್‍ನಲ್ಲಿ ಬಂದು ಅನ್ವರ್ ಅವರ ಹೊಟ್ಟೆ, ಎದೆ, ತಲೆ ಇನ್ನಿತರ ಭಾಗಗಳಿಗೆ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಕುಸಿದು ಬಿದ್ದ ಇವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆಗೆ ಫಲಿಸದೆ ಮೃತಪಟ್ಟಿದ್ದಾರೆ. ಹೆಚ್ಚುವರಿ ಎಸ್ಪಿ ಗೀತಾ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin