ಬೆಂಗಳೂರಿಗರೇ ಹುಷಾರ್, ಮತ್ತೆ ಹೆಚ್ಚುತ್ತಿದೆ ಚಿಕೂನ್‍ಗುನ್ಯಾ, ಡೇಂಘಿ..!

ಈ ಸುದ್ದಿಯನ್ನು ಶೇರ್ ಮಾಡಿ

xಬೆಂಗಳೂರು, ಸೆ.14- ಕೊರೊನಾ ಮಧ್ಯೆ ಮರೆಯಾಗಿದ್ದ ಡೇಂಘಿ, ಚಿಕೂನ್‍ಗುನ್ಯಾ ಸಾಂಕ್ರಾಮಿಕ ರೋಗಗಳು ಮತ್ತೆ ಸದ್ದು ಮಾಡುತ್ತಿವೆ. ರಾಜ್ಯದಲ್ಲಿ ಕಳೆದ ಸೆ.9ರಂದು ಒಂದೇ ದಿನ 1557 ಜನರಿಗೆ ಡೇಂಘಿ ಇರುವ ಶಂಕೆ ಕಂಡು ಬಂದಿತ್ತು. 208 ಮಂದಿಯನ್ನು ರಕ್ತ ಪರೀಕ್ಷೆಗೆ ಒಳಪಡಿಸಲಾಗಿತ್ತು. 38 ಮಂದಿಗೆ ಡೇಂಘಿ ಜ್ವರ ಇರುವುದು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಕೋವಿಡ್ ಎರಡನೇ ಅಲೆ ಕಡಿಮೆಯಾಗುತ್ತಿದ್ದಂತೆ ಇತರೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿರುವುದು ಜನರಲ್ಲಿ ಭಯ ಉಂಟುಮಾಡಿದೆ. ಮಳೆ ಹಾಗೂ ಚಳಿಗಾಲದ ಹಿನ್ನೆಲೆಯಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ವೆ ತಂಡಗಳು ಈಗಾಗಲೇ ಪರಿಹಾರ ಹುಡುಕುತ್ತಿದ್ದಾರೆ. ಸಾಮಾನ್ಯ ಜ್ವರ ಮತ್ತು ಡೇಂಘಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಗರದಲ್ಲಿ 800 ಜನರಿಗೆ ಡೇಂಘಿ ಇರುವುದು ಪತ್ತೆಯಾಗಿದೆ.

ರೂಪಾಂತರ ಹಾವಳಿ ಜತೆಗೆ ಬ್ರಾಂಕೈಟೀಸ್ ಹಾಗೂ ಡೇಂಘಿ ಹಾವಳಿ ಕೂಡ ಹೆಚ್ಚಾಗುತ್ತಿದೆ. ರಾಜಧಾನಿ ಬೆಂಗಳೂರಿನ ಹವಾಮಾನ ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿರುವುದು ಕೂಡ ಸಾಂಕ್ರಾಮಿಕ ರೋಗಗಳ ಉಲ್ಬಣಕ್ಕೆ ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ಸಿಲಿಕಾನ್ ಸಿಟಿಯ ಮಕ್ಕಳಲ್ಲಿ ಆರ್‍ಎಸ್‍ವಿ ಸೋಂಕಿನ ಪ್ರಮಾಣ ಕೂಡ ಹೆಚ್ಚಾಗಿದ್ದು, ಆಸ್ಪತ್ರೆಗಳಲ್ಲಿ ಬ್ರಾಂಕೈಟೀಸ್ ಸೋಂಕಿನ ಹೊಡೆತಕ್ಕೆ ಪೋಷಕರು ಕಂಗಾಲಾಗಿದ್ದಾರೆ.

ಕೊರೊನಾ ಲಕ್ಷಣಗಳೇ ಈ ಬ್ರಾಂಕೈಟೀಸ್ ವೈರಸ್‍ನಲ್ಲಿ ಕಾಣಿಸಿಕೊಳ್ಳುವುದರಿಂದ ಸಹಜವಾಗಿಯೇ ಪೋಷಕರಲ್ಲಿ ಆತಂಕ ಉಂಟಾಗುತ್ತಿದೆ. ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳನ್ನು ಈ ವೈರಸ್ ಟಾರ್ಗೆಟ್ ಮಾಡುತ್ತಿದೆ. ನಗಡಿ, ಕೆಮ್ಮು, ಕಫ ಈ ಬ್ರಾಂಕೈಟೀಸ್ ಲಕ್ಷಣಗಳಾಗಿದ್ದು, ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಈ ವೈರಸ್ ಕಾಡುತ್ತಿರುವುದು ಪೋಷಕರನ್ನು ಆತಂಕಕ್ಕೀಡು ಮಾಡಿದೆ. ಇದರ ಜತೆ ಡೇಂಘಿ ಜ್ವರದ ಹಾವಳಿ ಹೆಚ್ಚಾಗಿರುವುದು ಜನರಲ್ಲಿ ಭೀತಿ ಸೃಷ್ಟಿಸಿದೆ.

Facebook Comments