ಬಾಲ್ಯವಿಕಸನಕ್ಕೆ ಶಿಕ್ಷೆಯೊಂದೇ ದಾರಿಯಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬಾಲ್ಯ ಮಾನವ ಜೀವನದ ಸುಂದರ ಭಾಗ. ಬಾಲ್ಯದ ಆಟ-ಪಾಠ, ನಲಿವು, ಉತ್ಸಾಹ, ಕುತೂಹಲಗಳು ಮುಂದೆ ಉಳಿಯಲಾರವು. ಆನಂದವಾಗಿ ನಿಶ್ಚಿಂತೆಯಿಂದ ಕಳೆಯಬಹುದಾದ ಕಾಲ ಅದು. ಆದರೆ, ಮುಂದಿನ ಜೀವನಕ್ಕೆ ಬೇಕಾದ ಭದ್ರ ಅಡಿಪಾಯವನ್ನು ನಿರ್ಮಿಸುವ ಕಾಲವೂ ಅದೇ ಆದುದರಿಂದ ವಿದ್ಯಾಭ್ಯಾಸಕ್ಕೂ ಆಗಲೇ ಗಮನ ನೀಡಬೇಕಾದುದು ಅನಿವಾರ್ಯ.
ತಾಯಿ-ತಂದೆಯವರ ಪೊಷಣೆಯಲ್ಲಿ ಬೆಳೆದು, ಗುರುಮನೆಯಲ್ಲಿ ವಿದ್ಯಾಬುದ್ಧಿಯನ್ನು ಪಡೆದು ವಯಸ್ಸಿಗೆ ಬಂದ ಮೇಲೆ ಗೃಹಸ್ಥರಾಗಿ ಸಂಸಾರವೆಂಬ ಸುಂದರ ನಾಡಿನಲ್ಲಿ ವ್ಯವಹರಿಸಿ ಪ್ರತಿಯೊಬ್ಬರೂ ಆನೇಕ ಕ್ಲಿಷ್ಟ ಸಂದರ್ಭಗಳನ್ನು ಎದುರಿಸಬೇಕಾಗಿ ಬರಬಹುದೆಂಬುದನ್ನು ಲೋಕವೆಲ್ಲ ಬಲ್ಲದು. ಮನುಷ್ಯ ಮನುಷ್ಯನಾಗಿ ನೆಮ್ಮದಿಯಿಂದ ಬದುಕಬೇಕಾದಲ್ಲಿ ಬುದ್ಧಿ, ಜ್ಞಾನ, ಹೃದಯದ ವಿಜ್ಞಾನ ಎರಡನ್ನೂ ಪಡೆದಾಗಲೇ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳುತ್ತಾನೆ. ತಂದೆ-ತಾಯಿಗಳು ಹಾಗೂ ಅಧ್ಯಾಪಕ ವರ್ಗದವರು ಮಕ್ಕಳಿಂದ ಅತ್ಯಂತ ಹೆಚ್ಚಿನ ಸಾಧನೆಯನ್ನು ಈ ಕಾಲದಲ್ಲಿ ಅಂದರೆ ಬಾಲ್ಯದಲ್ಲಿ ನಿರೀಕ್ಷಿಸುತ್ತಾರೆ.

ಸಾಮಾಜಿಕ ಕಾರಣದಿಂದ ಮಕ್ಕಳು ಶಿಸ್ತಿನಿಂದ ಇರಬೇಕು ಎಂದು ಅಪೇಕ್ಷಿಸುತ್ತಾರೆ. ವಿದ್ಯಾಭ್ಯಾಸ ಕ್ರಮದಲ್ಲಿ ಬುದ್ಧಿಗೆ ವಶವಾಗಿಯೋ, ಭಾವಕ್ಕೆ ವಶವಾಗಿಯೋ ಒಂದು ಉದ್ದೇಶಕ್ಕಿಂತ ಮತ್ತೊಂದನ್ನು ಆರಿಸಿಕೊಂಡಾಗ ಅಂತಹ ತಪ್ಪಾಗಲಾರದಾದರೂ ಹಿಡಿದ ಉದ್ದೇಶವನ್ನು ನಿಶ್ಚಿತ ಮನಸ್ಸಿನಿಂದ ಮುಂದುವರಿಸಿಕೊಂಡು ಹೋಗುವ ಸಾಮಥ್ರ್ಯವನ್ನು ಬಾಲ್ಯದಲ್ಲಿ ಕಳೆದುಕೊಳ್ಳಬಾರದು. ಇಂತಹ ನಿರೀಕ್ಷೆ, ಅಪೇಕ್ಷೆಗಳಿಗೆ ಭಂಗ ಬಂದಾಗ ತಂದೆ-ತಾಯಿಗಳು ಮಕ್ಕಳಿಗೆ ಶಿಕ್ಷೆಯನ್ನೂ ವಿಸುತ್ತಾರೆ.

ಶಿಕ್ಷೆ, ದಂಡನೆ ಇತ್ಯಾದಿಗಳು ಯಾರಿಗೂ ಹಿತಕರವಲ್ಲ, ಇವುಗಳಿಂದ ನಾವು ನಿರೀಕ್ಷಿಸುವ ಫಲವು ಸಾಧಾರಣವಾಗಿ ದೊರೆಯುವುದಿಲ್ಲ. ಸಾಮಾನ್ಯವಾಗಿ ಶಿಕ್ಷೆಗೆ ಗುರಿಯಾದವರು ಕ್ರೋಧದಿಂದ ಪ್ರತಿಕ್ರಿಯೆ ವ್ಯಕ್ತಪಡಿಸುವರೆ ಹೊರತು ತಪ್ಪನ್ನು ತಿದ್ದಿಕೊಳ್ಳುವ ಕಡೆಗೆ ಮನಸ್ಸನ್ನು ನೀಡುವುದಿಲ್ಲ. ಶಿಕ್ಷೆ ವಿಸಿದವರ ಮೇಲೆ ದ್ವೇಷವೇ ಪ್ರಾಯಶಃ ಇಲ್ಲಿ ಬರುವ ಫಲಿತಾಂಶ. ಆದ್ದರಿಂದ ಶಿಕ್ಷೆಯನ್ನು ಕೊಡುವವರು, ವಿಶೇಷತಃ ಮಕ್ಕಳಿಗೆ ಶಿಕ್ಷೆ ಕೊಡುವವರು ಹತ್ತು ಬಾರಿ ಯೋಚಿಸಿ ಮುಂದುವರಿಯ ಬೇಕು. ಶಾರೀರಿಕ ಶಿಕ್ಷೆಯಂತು ಸರ್ವಥಾ ಸರಿಯಲ್ಲ ಎಂಬುದೇ ತಜ್ಞರ ಅಭಿಪ್ರಾಯವಾಗಿದೆ.

ಬಿಲ್ಲಿನ ಕಂಬಿಗೆ ಬಲವಿದೆ, ಆದರೆ ಅದನ್ನು ಬಗ್ಗಿಸುವ ತೋಳಿಗೆ ಶಾಸ್ತ್ರೋಕ್ತವಾದ ಬಲವಿರಬೇಕು. ಕೈಯಲ್ಲಿ ಶಸ್ತ್ರಾಸ್ತ್ರ ದೊರಕಿದರೂ ಅವನ ಅಸಾಮಥ್ರ್ಯದಿಂದ ಅವುಗಳ ಸಾಮಥ್ರ್ಯ ಪ್ರಕಾಶಿತವಾಗುವುದಿಲ್ಲ. ಮಕ್ಕಳ ಮನಸ್ಸು ಹೀಗೆಯೇ ಆದ್ದರಿಂದ ಅದನ್ನು ಅರ್ಥೈಸಿಕೊಳ್ಳಬೇಕು.

ಹೀಗಿದ್ದರೂ ಬಹಳ ಕಾಲದಿಂದ ಸಾಮಾನ್ಯ ಜನರಲ್ಲಿ ಮಕ್ಕಳಿಗೆ ದಂಡನೆ, ಅದರಲ್ಲೂ ಶರೀರಕ್ಕೆ ನೋವನ್ನುಂಟುಮಾಡುವ ಶಿಕ್ಷೆ ಅನಿವಾರ್ಯ, ಅದೇ ಅವರಿಗೆ ಒಳ್ಳೆಯದು ಎಂಬ ತಪ್ಪು ಭಾವನೆ ಒಡಮೂಡಿದೆ. ಶಾಲೆಗೆ ಮಕ್ಕಳನ್ನು ಕಳುಹಿಸಿದ ತಂದೆ-ತಾಯಿಗಳು ಅಧ್ಯಾಪಕರಿಗೆ ನಮ್ಮ ಹುಡುಗನಿಗೆ ಚೆನ್ನಾಗಿ ಏಟು ಕೊಟ್ಟು ಬುದ್ಧಿ ಕಲಿಸಿ ಎಂದು ಹೇಳುವುದು ವಿರಳವೇನಲ್ಲ.

 # ಸಂಸ್ಕøತದಲ್ಲಿ ಒಂದು ಶ್ಲೋಕವಿದೆ:
ಲಾಲನಾದ್ ಬಹವೋ ದೋಷಾಃ ತಾಡನಾದ್ ಬಹವೋ ಗುಣಾಃ
ತಸ್ಮಾತ್ ಪುತ್ರಂ ಚ ಶಿಷ್ಯಂ ಚ ತಾಡಯೇನ್ನತು ಲಾಲಯೇತ್
ಲಾಲನೆಯಿಂದ ದೋಷಗಳೇ ಹೆಚ್ಚು, ಹೊಡೆಯುವು ದರಿಂದ ಹೆಚ್ಚಿನ ಗುಣವಿದೆ, ಆದ್ದರಿಂದ ಮಗನನ್ನೂ ಶಿಷ್ಯನನ್ನೂ ಹೊಡೆಯಬೇಕು, ಮುದ್ದಿನಿಂದ ಲಾಲಿಸಬಾರದು ಎಂಬುದೇ ಇದರ ಅರ್ಥ. ಇದು ಪ್ರಾಚೀನ ಸಂಸ್ಕøತ ಶ್ಲೋಕವಾದರೂ ಶುದ್ಧ ಅವಿವೇಕದ ಪರಿಣಾಮವಾಗಿ ಬಂದಿರುವ ಶ್ಲೋಕ ಎಂಬುದರಲ್ಲಿ ಸಂಶಯವಿಲ್ಲ. ಲಾಲನೆಯಿಂದ ಮಕ್ಕಳಿಗೆ ವಿದ್ಯೆ, ಬುದ್ಧಿ, ಒಳ್ಳೆಯ ನಡತೆಗಳು ಬರಬಹುದೇ ಹೊರತು ಹೊಡೆತ-ಬಡಿತಗಳಿಂದಲ್ಲ. ಲಾಲನೆ ಅತಿ ಆಗಬಾರದು ಎಂಬುದು ಬೇರೆ ವಿಷಯ.

ಹೀಗೆ ಹೊಡೆತಗಳಿಂದ ವಿದ್ಯೆ ಮಕ್ಕಳಿಗೆ ಬರುತ್ತದೆ ಎನ್ನುವ ಭ್ರಾಂತಿ ನಮ್ಮ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಇತ್ತು.
ಇಂಗ್ಲೀಷ್‍ನಲ್ಲಿ Spare the rod and spoil the child ಎಂಬ ಗಾದೆ ಇರುವುದನ್ನು ನಾವು ಗಮನಿಸಬಹುದು. ಈ ಭ್ರಾಂತಿಯನ್ನು ಆಧಾರವಾಗಿಟ್ಟುಕೊಂಡು ಅನೇಕ ಅಧ್ಯಾಪಕರು ಅಧ್ಯಾಪನಕ್ಕಿಂತ ತಾಡನದಲ್ಲಿ ಪ್ರವೀಣರಾಗಿರುವುದು ಶೋಚನೀಯ. ಪದ್ಯವನ್ನು ಕಂಠಸ್ಥ ಮಾಡಲಿಲ್ಲ, ಮನೆ ಪಾಠ ಬರೆದು ತಂದಿಲ್ಲ, ಗಣಿತದಲ್ಲಿ ತಪ್ಪಾಗಿದೆ, ಶಾಲೆಗೆ ಬಂದುದು ತಡವಾಯಿತು. ಮುಂತಾದ ಯಾವುದಾದರೂ ಒಂದು ಕಾರಣಕ್ಕಾಗಿ ಹುಡುಗರಿಗೆ ಹೊಡೆಯುವುದು ನಮ್ಮ ಹೆಚ್ಚುಗಾರಿಕೆ ಎಂಬ ಅಧ್ಯಾಪಕರೂ ಇದ್ದಾರೆ. ಮನೆಯಲ್ಲಿನ ತರಲೆ, ತಾಪತ್ರಯಗಳಿಂದ ತಲೆ ಬಿಸಿಯಾದಾಗ ಆ ದೋಷವನ್ನು ಹುಡುಗರ ಬೆನ್ನ ಮೇಲೆ ಬಾಸುಂಡೆ ಬರಿಸಿ ತೀರಿಸಿಕೊಳ್ಳುವ ವೀರರೂ ಇಲ್ಲದಿಲ್ಲ.

ತನಗೆ ತಿಳಿಯದ್ದನ್ನು ಸ್ವಂತ ಪರಿಶ್ರಮದಿಂದ ತಿಳಿದುಕೊಳ್ಳುವುದು, ಪರಿಶ್ರಮದಿಂದ ತಾನು ತಿಳಿದಿದ್ದನ್ನು ಪುನಃ ಪರಿಶ್ರಮ ಪೂರ್ವಕವಾಗಿ ತಿಳಿಯದವರಿಗೆ ತಿಳಿಯಪಡಿಸುವುದು ಈ ಎರಡೂ ಕಾರ್ಯವನ್ನು ಸಮರ್ಪಕವಾಗಿ, ಸಾರ್ಥಕವಾಗಿ ಸಫಲವನ್ನಾಗಿಸುವವನೆ ಅಧ್ಯಾಪಕ ಎನ್ನುವುದು ಹಿರಿಯರ ಮಾತು. ಹಲವು ಸಂದರ್ಭಗಳಲ್ಲಿ ಅಧ್ಯಾಪಕರಿಗೆ ಉತ್ತರಿಸಲಾಗದ ಪ್ರಶ್ನೆಗಳನ್ನು ಕೇಳುವ ವಿದ್ಯಾರ್ಥಿಗಳು ಅವಿಧೇಯರೆನಿಸಿಕೊಳ್ಳಬೇಕಾಗಬಹುದು. ಅಂತಹ ವಿದ್ಯಾರ್ಥಿಗಳು ಬೆತ್ತದ ಏಟಿನ ಸವಿಯನ್ನು ತಿಳಿಯಬೇಕಾದ ಪ್ರಸಂಗಗಳೇ ಹೆಚ್ಚು. ಇವೆಲ್ಲ ನಮ್ಮ ವಿದ್ಯಾಭ್ಯಾಸ ಕ್ರಮದ ಮುಖ್ಯ ಲೋಪಗಳಾಗಿದ್ದು, ವಿದ್ಯಾಭ್ಯಾಸವನ್ನು ವಿದ್ಯಾಭಾಸವನ್ನಾಗಿ ಮಾಡಿಬಿಟ್ಟಿವೆ.

ಶಾಲೆಗೆ ಹೋಗಿ ಬುದ್ಧಿಶಕ್ತಿಯ ವಿಕಾಸವನ್ನು ಮಕ್ಕಳು ಪಡೆಯಲಿ ಎಂದು ತಂದೆ-ತಾಯಿ ಆಶಿಸಿದರೆ ವಾಸ್ತವದಲ್ಲಿ ಆಗುವುದು ತದ್ವಿರುದ್ಧ. ಮಕ್ಕಳ ಮಿದುಳು ಒಂದು ಖಾಲಿ ಚೀಲ, ಅದರಲ್ಲಿ ಅಷ್ಟು ವಿಷಯಗಳನ್ನು ತುರುಕಿ ತುಂಬಿಸಿದರಾಯಿತು ಎನ್ನುವ ಅಧ್ಯಾಪಕರು ಹೆಚ್ಚಿರುವಾಗ ಬೇರೇನು ತಾನೆ ಸಾಧ್ಯ? ಈ ಸ್ಥಿತಿ ಬದಲಾಗುತ್ತದೆ ಎನ್ನುವ ಆಸೆಯನ್ನು ವ್ಯಕ್ತಪಡಿಸುವುದು ಒಂದೇ ನಮಗಿರುವ ಏಕೈಕ ದಾರಿ. ಆದರೂ ಶಿಷ್ಯನಾದವನು ತಾನು ಕಲಿಯುವ ವಿದ್ಯೆಯನ್ನು ಮೊದಲ ಕಾಲುಭಾಗವನ್ನು ಮಾತ್ರ ತನ್ನ ಗುರುವಿನಿಂದ ಪಡೆಯುತ್ತಾನೆ.

ಎರಡನೇ ಕಾಲು ಭಾಗವನ್ನು ತನ್ನ ಸ್ವಬುದ್ಧಿಯಿಂದ ಸಂಪಾದಿಸುತ್ತಾನೆ. ಮೂರನೇ ಕಾಲುಭಾಗವನ್ನು ತನ್ನ ಜೊತೆಯವರಿಂದ ಕಲಿಯುತ್ತಾನೆ. ಈ ಮೂರು ಭಾಗವನ್ನು ತನ್ನದಾಗಿಸಿಕೊಂಡಾಗ ಉಳಿದ ಕಾಲುಭಾಗ ಕಾಲಕ್ರಮದಲ್ಲಿ ತಾನೆ ದೊರಕುತ್ತದೆ ಎಂದ ಮೇಲೆ ಅಧ್ಯಾಪಕನಾದವನು ನಿರ್ವಂಚನೆಯಿಂದ ತನ್ನ ಕರ್ತವ್ಯವನ್ನು ಪ್ರಾಮಾಣಿಕ ಕಳಕಳಿಯಿಂದ ಪೂರ್ಣಗೊಳಿಸಿದಾಗ ಉಳಿದ ಭಾಗ ಶಿಷ್ಯನಿಗೆ ದೈವಾನುಗ್ರಹದಿಂದ ಪರಿಪಕ್ವತೆ ಮೂಡುವಂತೆ ಮಾಡುತ್ತದೆ.

ಇತ್ತೀಚೆಗಂತೂ ಅಧ್ಯಾಪಕರೆನಿಸಿಕೊಂಡವರು ಸರ್ವವನ್ನೂ ಬಲ್ಲವರಂತೆ ಉಪದೇಶಿಸುತ್ತಿರುತ್ತಾರೆ. ಉಪದೇಶವೇಲಾಯಾಂ ಜನೇಸರ್ವೇಪಿ ಪಂಡಿತ: ಎನ್ನುವ ಮಾತುಗಳನ್ನು ಅಕ್ಷರಶಃ ಪಾಲಿಸುತ್ತಿದ್ದಾರೆ. ಆದರೆ ಅದು ಉಪದೇಶದಲ್ಲಿ ಮಾತ್ರ! ಎಲ್ಲಬಲ್ಲವರಿಲ್ಲ; ಬಲ್ಲವರು ಬಹಳಿಲ್ಲ ಬಲ್ಲಿದರು ಇದ್ದು ಬಲವಿಲ್ಲ; ಸಾಹಿತ್ಯವೆಲ್ಲರಿಗೆ ಇಲ್ಲಿ ಸರ್ವಜ್ಞ ಎಂದಿಲ್ಲವೇ!
-ಸುಭಾಷಿತಕಾರ

Facebook Comments

Sri Raghav

Admin