ಪತ್ನಿಯ ಶವ ಕಂಡು ಪತಿ ಆತ್ಮಹತ್ಯೆಗೆ ಯತ್ನ..!
ಥಾಣೆ,ಡಿ.11-ಕಳೆದ ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಮಹಿಳೆ ಹಾಗೂ ಆಕೆಯ ಮೂರು ಮಕ್ಕಳ ಶವ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಳೆತು ಹೋಗಿದ್ದ ತನ್ನ ಕುಟುಂಬದವರ ಶವಗಳನ್ನು ಕಂಡು ಪತಿ ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ರಂಜನಾ ಬಂಗ್ರಿ ಮತ್ತು ಆಕೆಯ 6 ರಿಂದ 12 ವರ್ಷದೊಳಗಿನ ಮೂವರು ಮಕ್ಕಳು ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಥಾಣೆ ಜಿಲ್ಲೆಯ ಬೀವಾಂಡಿ ತಾಲೂಕಿನ ಪಚ್ಚಪುರ್ ಕಾಡಿನಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿವೆ ಎಂದು ಪಡ್ಗಾ ಪೊಲೀಸ್ ಠಾಣೆಯ ಇನ್ಸ್ಪೇಕ್ಟರ್ ಡಿ.ಎಂ.ಕಾಟ್ಕೆ ತಿಳಿಸಿದ್ದಾರೆ. ರಂಜನಾ ಮತ್ತು ಆಕೆಯ ಮೂರು ಮಕ್ಕಳು ಕಳೆದ ಅಕ್ಟೋಬರ್ ತಿಂಗಳಿನಿಂದ ನಾಪತ್ತೆಯಾಗಿದ್ದರು. ಇದೀಗ ಅವರ ಶವಗಳು ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
ಮರದಲ್ಲಿ ಕೊಳೆತು ನೇತಾಡುತ್ತಿದ್ದ ಪತ್ನಿ ಹಾಗೂ ಮಕ್ಕಳ ಶವಗಳನ್ನು ನೋಡಿದ ಪತಿ ಶ್ರೀಪತ್ ಬಂಗ್ರಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.