ಮಕ್ಕಳಿಗೆ ಕೊರೊನ ಲಸಿಕೆ ನೀಡುವ ಬಗ್ಗೆ ಸಚಿವ ಸುಧಾಕರ್ ಹೇಳಿದ್ದೇನು ?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.14- ಮಕ್ಕಳ ಮೇಲೆ ಕೋವಿಡ್ ಲಸಿಕೆಯ ಪ್ರಯೋಗ ನಡೆಯುತ್ತಿದೆ, ಅದರ ಅಂತಿಮ ವರದಿ ಬಂದ ಬಳಿಕೆ ಮಕ್ಕಳಿಗೂ ಲಸಿಕೆ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಜತ ಮಹೋತ್ಸದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

ಮಕ್ಕಳಿಗೆ ಗಂಭೀರ ಪರಿಣಾಮ ಆಗಬಹುದು ಅಂತ ತಜ್ಞರು ಹೇಳಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಮಕ್ಕಳ ಕೇಂದ್ರ ತೆರೆಯಲಾಗುತ್ತಿದೆ. ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಯುತ್ತಿದೆ. ವರದಿ ಬಂದ ಮೇಲೆ ಮಕ್ಕಳಿಗೆ ಲಸಿಕೆ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ಹೆಚ್ಚು ಜನ ಓಡಾಡುತ್ತಿರುವುದನ್ನು ನೋಡಿದರೆ ನನಗೆ ಆತಂಕವಾಗುತ್ತಿದೆ. ಬಹಳ ಜನ ಹೊರಗೆ ಓಡಾಡುತ್ತಿರುವುದರಿಂದ ಟ್ರಾಫಿಕ್ ಮೊದಲಿನಂತೆ ಆಗಿದೆ. ಜನ ಎಚ್ಚರಿಕೆ ವಹಿಸಬೇಕು. ಕೈಗಾರಿಕೆಗಳಿಗೆ ಅನುಮತಿ ಕೊಟ್ಟಿರುವುದರಿಂದ ಜನ ಹೆಚ್ಚು ಓಡಾಡುತ್ತಿದ್ದಾರೆ.
ಬೆಂಗಳೂರಿಗೆ ಬರುವವರಿಗೆಲ್ಲಾ ರ್ಯಾಂಡಮ್ ಟೆಸ್ಟ್ ಮಾಡಿಸಲು ನಿರ್ಧರಿಸಲಾಗಿದೆ.

ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಟೋಲ್ಗಳ ಬಳಿ ಪ್ರಯಾಣಿಕರನ್ನು ರ್ಯಾಂಡಮ್ ಆಗಿ ಟೆಸ್ಟ್ ಮಾಡಲಾಗುತ್ತದೆ. ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಟೆಸ್ಟ್ ಮಾಡಿಸಲೇಬೇಕಿದೆ ಎಂದು ಹೇಳಿದರು. ಹಂತಹಂತವಾಗಿ ಅನ್ಲಾಕ್ ಮಾಡಲೇಬೇಕಿದೆ. ಲಾಕ್ ಡೌನ್ ಕೋವಿಡ್ ಗೆ ಶಾಶ್ವತ ಪರಿಹಾರ ಅಲ್ಲ. ಲಸಿಕೆ ಹೆಚ್ಚು ಹೆಚ್ಚು ಕೊಟ್ಟು ಅನ್ ಲಾಕ್ ಮಾಡಬೇಕಿದೆ. ಜನರೂ ಸಹ ಮುನ್ನೆಚ್ಚರಿಕೆಯಿಂದ ವರ್ತಿಸಬೇಕು ಎಂದರು.

ರಾಜೀವ್ ಗಾಂಧಿ ಆರೋಗ್ಯ ವಿವಿಕ್ಕೆ ಕಾಲ ಕಾಲಕ್ಕೆ ಕುಲಪತಿಗಳನ್ನು ನೇಮಿಸಲಾಗುತ್ತಿತ್ತು. ೨೫ ವರ್ಷಗಳು ಇತಿಹಾಸದಲ್ಲೇ ಮೊದಲ ಬಾರಿಗೆ ಹಂಗಾಮಿ ಕುಲಪತಿ ನೇಮಿಸಲಾಗಿದೆ. ರಾಜ್ಯಪಾಲರು ಕೂಡ ನನ್ನ ಜೊತೆ ಮಾತನಾಡಬೇಕಿತ್ತು, ಬಹುಶಃ ಕೋವಿಡ್ ನಿಂದಾಗಿ ಮಾತುಕತೆ ಸಾಧ್ಯವಾಗಿಲ್ಲ.

ರಾಜ್ಯಪಾಲರಿಗೆ ನಾನು ಪತ್ರ ಬರೆದಿದ್ದೇನೆ. ಈ ಕುರಿತು ಬಹಿರಂಗವಾಗಿ ಮಾತನಾಡುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆಯಲ್ಲೂ ಚರ್ಚೆ ಮಾಡಿದ್ದೇನೆ. ಅವರು ಕೆಲವು ವಿಷಯಗಳನ್ನ ತಿಳಿಸಿದ್ದಾರೆ. ಅದನ್ನು ರಾಜ್ಯಪಾಲರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಜೂನ್ 16 ರಂದು ರಾಜ್ಯ ಬಿಜೆಪಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅರುಣ್ ಸಿಂಗ್ ಅವರ ಜತೆ ಪಕ್ಷದ ಕಾರ್ಯಾಲಯದಲ್ಲಿ ಸಚಿವರ ಸಭೆ ಇದೆ. ಅಲ್ಲಿ ಎಲ್ಲ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆ, ಕೋವಿಡ್ ಕ್ರಮಗಳ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದರು.

Facebook Comments