ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ತಿ.ನರಸೀಪುರ, ಸೆ.23- ತುತ್ತಿನ ಚೀಲ ತುಂಬಿಸಿಕೊಳ್ಳಲು ಮಕ್ಕಳೊಂದಿಗೆ ಬಳ್ಳಾರಿಯಿಂದ ಕಬ್ಬು ಕಟಾವು ಮಾಡುವ ಕೆಲಸಕ್ಕೆ ಬಂದ ಪೋಷಕರು ಈಗ ತಮ್ಮ ಕಂದಮ್ಮಗಳನ್ನು ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಬಳ್ಳಾರಿಯಿಂದ ಕಬ್ಬು ಕಟಾವಿಗೆ ಆಗಮಿಸಿದ್ದ ಕುಟುಂಬ ಗ್ರಾಮದ ಮುಸವಿ ಎಂಬ ಖಾಲಿ ಜಾಗದಲ್ಲಿ ಡೇರೆ ಹಾಕಿ ವಾಸವಾಗಿತ್ತು.

ಆಟವಾಡಲು ಹೋದ ಮೂವರು ಪುಟ್ಟ ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಬನ್ನೂರು ಹೋಬಳಿ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲಾಯ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಪಾಳ್ಯ ಹೋಬಳಿ ನಾಗಲಾಪುರ ತಾಂಡಾದ ಅಂಬರೀಷ್ ನಾಯಕ ಎಂಬುವರ ಪುತ್ರಿ ಕಾವೇರಿ(2), ರಾಮ ನಾಯಕರ ಪುತ್ರ ಸಂಜಯï(4) ಹಾಗೂ ರವಿ ನಾಯಕ ಎಂಬುವರ ಪುತ್ರ ರೋಹಿತ್ (2) ಎಂಬುವರೇ ಮೃತಪಟ್ಟ ದುರ್ದೈವಿ ಮಕ್ಕಳು.

ಕಬ್ಬು ಕಟಾವು ಮಾಡುವ ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಪೇಟೆಗೆ ದಿನಸಿ ತರಲು ಹೊರಟು ನಿಂತಾಗ ಮೂವರು ಮಕ್ಕಳು ಕಾಣದ ಪರಿಣಾಮ ಭೀತರಾದ ಕುಟುಂಬದ ಪೋಷಕರು ಮಕ್ಕಳಿಗಾಗಿ ಹುಡುಕಾಟ ನಡೆಸಲಾಗಿ ಗ್ರಾಮದ ಶಿವರಾಜು ಎಂಬುವರಿಗೆ ಸೇರಿದ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಕೃಷಿ ಹೊಂಡದಲ್ಲಿ ಮಕ್ಕಳ ಶವಗಳು ಪತ್ತೆಯಾಗಿವೆ.
ಆಟವಾಡುವ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿ ಪುಟ್ಟ,ಪುಟ್ಟ ಮಕ್ಕಳನ್ನು ಕಳೆದು ಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಅಡಿಷನಲ್ ಎಸ್‍ಪಿ ಶಿವಕುಮಾರ್, ನಂಜನಗೂಡು ಡಿವೈಎಸ್‍ಪಿ ಪ್ರಭಾಕರರಾವ್ ಸಿಂಧೆ, ಬನ್ನೂರು ಪೊಲೀಸ್ ಠಾಣೆಯ ಪಿಎಸ್‍ಐ ಪುನೀತ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬನ್ನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಬಳ್ಳಾರಿಯ ಹೊಸಪೇಟೆಗೆ ಕಳುಹಿಸಿಕೊಡಲಾಗಿದೆ. ಬನ್ನೂರು ಪೇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments