ಮಕ್ಕಳ ಕಲಿಕೆಗೆ ಕಲ್ಲುಹಾಕಿದ ಕೊರೊನಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.15- ಕೋವಿಡ್ ಪಿಡುಗಿನಿಂದಾಗಿ ದೇಶದಾದ್ಯಂತ ಶಾಲಾ ಪೂರ್ವ ನರ್ಸರಿಗಳಲ್ಲಿನ ಪುಟ್ಟ ಮಕ್ಕಳ ಕಲಿಕೆಯು ತೀವ್ರವಾಗಿ ಬಾಧಿತವಾಗಿದೆ. ನರ್ಸರಿಗೆ ಹೋಗುವ ಮಕ್ಕಳ ಪಾಲಕರಲ್ಲಿ ಯುರೊಕಿ ಇಂಟರ್ ನ್ಯಾಷನಲ್ ನಡೆಸಿದ ಸಮೀಕ್ಷೆ ಪ್ರಕಾರ, ಕೋವಿಡ್-19 ಪಿಡುಗಿನಿಂದಾಗಿ 2020ರ ಶೈಕ್ಷಣಿಕ ವರ್ಷಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಇದರಿಂದಾಗಿ ತಮ್ಮ ಮಕ್ಕಳ ಕಲಿಕೆಗೆ ಎರವಾಗಲಿರುವ ಬಗ್ಗೆ ಪಾಲಕರು ಹೆಚ್ಚು ಚಿಂತಿತರಾಗಿದ್ದಾರೆ.

ಈ ಪಿಡುಗಿನ ಸಂದರ್ಭದಲ್ಲಿ ಚಿಣ್ಣರ ಶಿಕ್ಷಣವು ಯಾವುದೇ ಕಾರಣಕ್ಕೂ ಬಾಧಿತವಾಗದೆ ಮುಂದುವರೆಯಬೇಕು ಎನ್ನುವುದು ಅವರ ಆಶಯವಾಗಿದೆ. ತಮ್ಮ ಮಕ್ಕಳ ನಿರಂತರ ಶಿಕ್ಷಣದ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿನ ಪಾಲಕರು ಚಿಂತಿತರಾಗಿರುವುದು ಸಮೀಕ್ಷೆಯ ಫಲಿತಾಂಶದಿಂದ ದೃಢಪಟ್ಟಿದೆ. ಶೇ.95ರಷ್ಟು ಪಾಲಕರು ಶಿಕ್ಷಣವನ್ನು ಮುಂದುವರೆಸುವುದನ್ನು ಖಚಿತಪಡಿಸಲು ತಮ್ಮ ಮಕ್ಕಳನ್ನು ಆನ್ಲೈನ್ ಅಥವಾ ಮನೆ ಶಾಲೆಗೆ ದಾಖಲಿಸಿದ್ದಾರೆ.

ಒಂದು ವಾರದಲ್ಲಿ ನಿಮ್ಮ ಮಕ್ಕಳು ಕಲಿಕೆಗೆ ಎಷ್ಟು ಸಮಯ ತೆಗೆದುಕೊಳ್ಳುವರು ಎನ್ನುವ ಪ್ರಶ್ನೆಗೆ 1 ರಿಂದ 3 ಗಂಟೆಯವರೆಗೆ ಸಮಯ ತೆಗೆದುಕೊಳ್ಳುತ್ತಾರೆ ಎಂದು ಶೇ.43ರಷ್ಟು ಪಾಲಕರು ಮತ್ತು ಮೂರು ಗಂಟೆಗಿಂತ ಹೆಚ್ಚಿನ ಸಮಯವನ್ನು ಕಲಿಕೆಯಲ್ಲಿ ಕಳೆಯುತ್ತಾರೆ ಎಂದು ಶೇ.37ರಷ್ಟು ಪಾಲಕರು ತಿಳಿಸಿದ್ದಾರೆ.

ಪುಟ್ಟ ಮಕ್ಕಳ ಆನ್‍ಲೈನ್ ಕಲಿಕೆಯಲ್ಲಿ ಪಾಲಕರ ಪಾಲ್ಗೊಳ್ಳುವಿಕೆ ಮತ್ತು ತಮ್ಮ ಮಕ್ಕಳ ಕಲಿಕೆಯ ಪ್ರಕ್ರಿಯೆಯಲ್ಲಿ ಪಾಲಕರು ಅವರೊಂದಿಗೆ ಕಳೆಯುವ ಸಮಯವೂ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಒಂದು ವಾರದಲ್ಲಿ ತಮ್ಮ ಮಕ್ಕಳ ಕಲಿಕೆಯಲ್ಲಿ ಪಾಲಕರು ಎಷ್ಟು ಸಮಯ ಕಳೆಯುತ್ತಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ.43ರಷ್ಟು ಪಾಲಕರು ಒಂದು ವಾರಕ್ಕೆ ಮೂರು ಗಂಟೆಗಿಂತ ಹೆಚ್ಚಿನ ಸಮಯ ಕಳೆಯುವುದಾಗಿ ಉತ್ತರಿಸಿದ್ದಾರೆ. ಪುಟ್ಟ ಮಕ್ಕಳ ಬಹುತೇಕ ಕಲಿಕೆಯಲ್ಲಿ ಅವರ ಪಾಲಕರ ನೆರವು ಅಗತ್ಯವಾಗಿ ಬೇಕಾಗಿರುವುದನ್ನು ಇದು ಸೂಚಿಸುತ್ತದೆ.

ತಮ್ಮ ಮಕ್ಕಳ ಕಲಿಕೆಯಲ್ಲಿ ಒಂದು ವಾರದಲ್ಲಿ 1 ರಿಂದ 3 ಗಂಟೆಯವರೆಗಿನ ಸಮಯವನ್ನು ತಾವು ಮೀಸಲು ಇರಿಸುವುದಾಗಿ ಶೇ.42ರಷ್ಟು ಪಾಲಕರು ಮಾಹಿತಿ ನೀಡಿದ್ದಾರೆ. ಸಮೀಕ್ಷೆಗೆ ವ್ಯಕ್ತವಾದ ಇಂತಹ ಎಲ್ಲ ಪ್ರತಿಕ್ರಿಯೆಗಳನ್ನು ಆಳವಾಗಿ ವಿಶ್ಲೇಷಿಸಿದಾಗ ಮಕ್ಕಳ ಕಲಿಕೆಯಲ್ಲಿ ಹೆಚ್ಚಿನ ಸಮಯ ಕಳೆಯುವುದಕ್ಕೆ ಹಲವಾರು ಪಾಲಕರು ಅನೇಕ ಸಮಸ್ಯೆಗಳನ್ನು ಎದುರಿಸುವುದು ಗೊತ್ತಾಗುತ್ತದೆ. ಆನ್‍ಲೈನ್ ತರಗತಿ ಅದಕ್ಕೆ ಸಂಬಂಧಿಸಿದ ಹೋಂ ವರ್ಕ್ ಮತ್ತು ಹೆಚ್ಚುವರಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪಾಲಕರು ಅನಿಯಮಿತವಾಗಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

Facebook Comments