ಬೆಂಗಳೂರಿನಿಂದ ನಾಪತ್ತೆಯಾದ ಮಕ್ಕಳು ಮಂಗಳೂರಿನಲ್ಲಿ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.12- ಎರಡು ದಿನಗಳ ಹಿಂದೆ ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ಬಿಸಿಎ ವಿದ್ಯಾರ್ಥಿನಿ ಹಾಗೂ ಮೂವರು ಮಕ್ಕಳು ಇದೀಗ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ. ಇಲ್ಲಿನ ಎಜಿಬಿ ಲೇಔಟ್‍ನ ಕ್ರಿಟನ್ ಕುಶಾಲ್ ಅಪಾರ್ಟ್‍ಮೆಂಟ್‍ನ ಬಿಸಿಎ ವಿದ್ಯಾರ್ಥಿನಿ ಅಮೃತವರ್ಷಿಣಿ (21) ಮತ್ತು ರಾಯನ್ ಸಿದ್ಧಾರ್ಥ್ (12), ಚಿಂತನ್ (12), ಭೂಮಿ (12) ಮಂಗಳೂರಿನಲ್ಲಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸೋಲದೇವನಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ನೇತೃತ್ವದ ತಂಡ ಮಂಗಳೂರಿಗೆ ಹೋಗಿದ್ದು, ಮಕ್ಕಳನ್ನು ನಗರಕ್ಕೆ ಕರೆತರಲಿದೆ.
ಕಳೆದ ಎರಡು ದಿನಗಳ ಹಿಂದೆ ಮನೆ ತೊರೆದಿದ್ದ ಈ ನಾಲ್ವರು ಬೆಂಗಳೂರಿನಿಂದ ಮಂಗಳೂರಿಗೆ ಬಸ್‍ನಲ್ಲಿ ಹೋಗಿದ್ದಾರೆ. ಇಂದು ಬೆಳಗ್ಗೆ ಬಸ್ ನಿಲ್ದಾಣದ ಸಮೀಪ ಅಮೃತವರ್ಷಿಣಿ ತಮ್ಮ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ ವಿಳಾಸ ಕೇಳುತ್ತಿದ್ದರು.

ಈ ನಾಲ್ವರು ಮಕ್ಕಳು ಕಾಣೆಯಾಗಿದ್ದ ಬಗ್ಗೆ ಮಾಧ್ಯಮಗಳಲ್ಲಿ ಅವರ ಫೋಟೋ ಮತ್ತು ಸುದ್ದಿ ಪ್ರಕಟವಾಗಿತ್ತು. ಆಟೋ ಚಾಲಕರೊಬ್ಬರು ಮಕ್ಕಳ ಚಲನ-ವಲನ ಗಮನಿಸಿ ಇವರು ಬೆಂಗಳೂರಿನಿಂದ ಕಾಣೆಯಾಗಿರುವ ಮಕ್ಕಳು ಎಂಬುದನ್ನು ಖಾತರಿಪಡಿಸಿಕೊಂಡು ವಿಳಾಸ ತೋರಿಸುವುದಾಗಿ ಹೇಳಿ ಚಾಲಾಕಿತನದಿಂದ ಅವರನ್ನು ತಮ್ಮ ಆಟೋದಲ್ಲಿ ಕೂರಿಸಿಕೊಂಡು ಸೀದಾ ಪಾಂಡೇಶ್ವರ್ ಫೋಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಫೋಲೀಸರಿಗೆ ಮಕ್ಕಳನ್ನು ಒಪ್ಪಿಸುವ ಮೂಲಕ ತಮ್ಮ ಕರ್ತವ್ಯ ಮೆರೆದಿದ್ದಾರೆ.

ಈ ಮಕ್ಕಳು ಯಾವುದಾದರೂ ಹಳ್ಳಿಗೆ ಹೋಗಿ ಆರಾಮಾಗಿ ಇರೋಣವೆಂದು ಅಂದುಕೊಂಡಿದ್ದರು ಎಂಬುದು ಫೋಲೀಸರ ವಿಚಾರಣೆಯಿಂದ ತಿಳಿದುಬಂದಿದೆ. ಮನೆಯಿಂದ ಹೊರಗೆ ಹೋಗಲು ಪ್ಲಾನ್ ಮಾಡಿದ ಅಮೃತವರ್ಷಿಣಿ 70 ಗ್ರಾಂ ಚಿನ್ನದ ನೆಕ್ಲೆಸ್, 3 ಸಾವಿರ ಹಣ ತೆಗೆದುಕೊಂಡು ಹೋಗಿರುವ ಬಗ್ಗೆ ಫೋಲೀಸರು ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡಿದ್ದರು. ಹೀಗಾಗಿ ಮಕ್ಕಳ ಮಾಹಿತಿಗಳನ್ನು ರಾಜ್ಯದ ಎಲ್ಲ ಠಾಣೆಗಳಿಗೂ ರವಾನಿಸಿ ಮಕ್ಕಳನ್ನು ಹುಡುಕಲಾಗುತ್ತಿತ್ತು.

ಬೆಂಗಳೂರು ಉತ್ತರ ವಿಭಾಗದ ಫೋಲೀಸರು 4 ತಂಡಗಳನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದರು. ಮಕ್ಕಳು ಮನೆ ಬಿಡುವ ಮುನ್ನ ಏನೇನು ತೆಗೆದುಕೊಂಡು ಹೋಗಬೇಕೆಂಬುದನ್ನು ಬರೆದಿದ್ದ ಪಟ್ಟಿಯನ್ನು ಗಮನಿಸಿದ ಫೋಲೀಸರು ಹಲವು ದಿನಗಳಿಂದ ಇವರು ಟ್ರಿಪ್ ಮಾಡುವ ಪ್ಲಾನ್ ಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಂಡರು.

ಆ ನಿಟ್ಟಿನಲ್ಲಿಯೂ ಸಹ ಬೀದರ್, ಬಳ್ಳಾರಿ, ಮಂಡ್ಯ ಸೇರಿದಂತೆ ಹಲವು ಕಡೆಗಳಲ್ಲಿ ಪೆÇಲೀಸರು ಮಕ್ಕಳಿಗಾಗಿ ಶೋಧ ಕೈಗೊಂಡಿದ್ದರು.
ಒಂದು ಕಡೆ ಮಕ್ಕಳ ಫೋಷಕರು ಫೋಲೀಸರ ಮೇಲೆ ಹೆಚ್ಚಿನ ಒತ್ತಡ ಹಾಕುತ್ತಿದ್ದರು, ಮತ್ತೊಂದೆಡೆ ಮೇಲಕಾರಿಗಳೂ ಸಹ ಆದಷ್ಟು ಶೀಘ್ರ ಮಕ್ಕಳನ್ನು ಪತ್ತೆಹಚ್ಚುವಂತೆ ತಾಕೀತು ಮಾಡಿದ್ದರು.

ಹೀಗಾಗಿ ಸೋಲದೇವನಹಳ್ಳಿ ಠಾಣೆ ಪೋಲೀಸರಿಗೆ ಈ ಮಕ್ಕಳ ನಾಪತ್ತೆ ಪ್ರಕರಣ ಸವಾಲಾಗಿ ಪರಿಣಮಿಸಿತ್ತು. ಸದ್ಯ ಇದೀಗ ಈ ಪ್ರಕರಣ ಸುಖಾಂತ್ಯಗೊಂಡಿರುವುದುಪೋಷಕರ ಜತೆಗೆ ಪೋಲೀಸರು ಸಹ ನಿರಾಳರಾಗಿದ್ದಾರೆ.

ಮಕ್ಕಳ ವಿಚಾರಣೆ: ಪಾಂಡೇಶ್ವರ ಠಾಣೆ ಪೋಲೀಸರು ಮಕ್ಕಳನ್ನು ಆತ್ಮೀಯವಾಗಿಯೇ ಮಾತನಾಡಿಸಿ ತಿಂಡಿ ನೀಡಿದ್ದಾರೆ. ನಂತರ ಮನೆಯಿಂದ ಹೊರಗೆ ಬರಲು ಕಾರಣವೇನೆಂದು ಕೇಳಿ ಮಾಹಿತಿ ಪಡೆದಿದ್ದಾರೆ.

ಟ್ರಿಪ್‍ಗೆಂದು ಬಂದೆವು: ಮನೆಯಲ್ಲಿ ಟ್ರಿಪ್‍ಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಸ್ನೇಹಿತರೆಲ್ಲ ಸೇರಿ ಹೋಗುತ್ತೇವೆಂದರೂ ಕಳುಹಿಸುತ್ತಿರಲಿಲ್ಲ. ಹೀಗಾಗಿ ನಾವುಗಳೆಲ್ಲ ವಾಕಿಂಗ್‍ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಬಂದು ಟ್ರಿಪ್‍ಗೆ ಬಂದೆವು ಎಂದು ಮಕ್ಕಳು ಪೋಲೀಸರ ಮುಂದೆ ಹೇಳಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಬಾಗಲಗುಂಟೆ ಪೋಲೀಸ್ ಠಾಣೆ ವ್ಯಾಪ್ತಿಯ ಸೌಂದರ್ಯ ಲೇಔಟ್‍ನಿಂದ ಶನಿವಾರ ಬೆಳಗ್ಗೆ ನಾಪತ್ತೆಯಾಗಿದ್ದ ಪರೀಕ್ಷಿತ್, ನಂದನ್ ಮತ್ತು ಕಿರಣ್ ಮೈಸೂರಿಗೆ ಹೋಗಿ ದಸರಾ ಕಾರ್ಯಕ್ರಮ ನೋಡಿಕೊಂಡು ವಿವಿಧ ಕಡೆ ಕೈಯಲ್ಲಿದ್ದ ಹಣವೆಲ್ಲ ಖರ್ಚಾದ ಬಳಿಕ ಬೆಂಗಳೂರಿಗೆ ರೈಲಿನಲ್ಲಿ ಬಂದು ನಿನ್ನೆ ಬೆಳಗ್ಗೆ ಆನಂದರಾವ್ ಸರ್ಕಲ್ ಬಳಿ ಹೋಗುತ್ತಿದ್ದಾಗ ಚಿಂದಿ ಆಯುವ ವ್ಯಕ್ತಿಯೊಬ್ಬರು ಮಕ್ಕಳನ್ನು ಗಮನಿಸಿ ಪೋಲೀಸರಿಗೆ ವಿಷಯ ತಿಳಿಸಿದ್ದು, ಪೋಲೀಸರು ಅವರನ್ನು ರಕ್ಷಿಸಿ ಪೋಷಕರ ಮಡಿಲು ಸೇರಿಸಿದ್ದರು. ಒಟ್ಟಾರೆ ನಗರದಲ್ಲಿ ಏಕಾಏಕಿ ಏಳು ಮಕ್ಕಳು ಮನೆ ಬಿಟ್ಟು ಹೋಗಿದ್ದುದು ರಾಜ್ಯಾದ್ಯಂತ ಸುದ್ದಿಯಾಗಿತ್ತು.

Facebook Comments