ಭಾರತದ ಉಪಗ್ರಹ ದೂರಸಂಪರ್ಕಗಳ ಮೇಲೆ ಚೀನಾ ನೆಟ್‍ವರ್ಕ್ ದಾಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಸೆ.23-ಭಾರತದ ವಿರುದ್ಧ ಸದಾ ಹಗೆತನದ ವಿಷ ಕಾರುತ್ತಿರುವ ಚೀನಾದ ಕುತಂತ್ರಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.  ಪದೇ ಪದೇ ಇಂಡೋ-ಚೀನಿ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ಚೀನಾ 2007ರಿಂದಲೂ ಭಾರತದ ಕಂಪ್ಯೂಟರ್ ನೆಟ್‍ವರ್ಕ್ ದಾಳಿಗಳನ್ನು ನಡೆಸುತ್ತಲೇ ಬಂದಿದೆ ಎಂದು ಅಮೆರಿಕದ ವರದಿಯೊಂದು ಹೇಳಿದೆ.

2017ರಲ್ಲಿ ಚೀನಾದ ಕಂಪ್ಯೂಟರ್ ನೆಟ್‍ವರ್ಕ್‍ಗಳು ಭಾರತೀಯ ಉಪಗ್ರಹ ದೂರ ಸಂಪರ್ಕಗಳ ಮೇಲೂ ಆಕ್ರಮಣ ನಡೆಸಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.  2017ರಲ್ಲಿ ಭಾರತವು ತನ್ನ ಮಹತ್ವದ ಬಾಹ್ಯಾಕಾಶ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಅಂತರಿಕ್ಷ ಕ್ಷೇತ್ರದಲ್ಲಿ ಹೊಸ ಮೈಲಿಗಳನ್ನು ಸಾಧಿಸಿತ್ತು.

ಇದೇ ಸಂದರ್ಭದಲ್ಲಿ ಚೀನಾದ ಹ್ಯಾಕರ್‍ಗಳು ಕಂಪ್ಯೂಟರ್ ನೆಟ್‍ವರ್ಕ್‍ಗಳ ಮೂಲಕ ಇಂಡಿಯನ್ ಸ್ಯಾಟಲೈಟ್ ಕಮ್ಯೂನಿಕೇಷನ್‍ಗಳ ಮೇಲೆ ದಾಳಿ ನಡೆಸಿ ದೂರಸಂಪರ್ಕಕ್ಕೆ ಅಡ್ಡಿ ಉಂಟು ಮಾಡಿತ್ತು ಎಂದು ವರದಿಯಲ್ಲಿ ತಿಳಿಸಿದೆ.

2007ರಿಂದಲೂ ಚೀನಾ ಭಾರತದ ವಿವಿಧ ನೆಟ್‍ವರ್ಕ್‍ಗಳ ಮೇಲೆ ದಾಳಿ ನಡೆಸುತ್ತಲೇ ಬಂದಿದೆ. ಈ ಕೃತ್ಯ ಈಗಲೂ ಮುಂದುವರಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಗೆ ಪುಷ್ಟಿ ನೀಡುವಂತೆ ಚೀನಾದ ಹ್ಯಾಕರ್‍ಗಳ ಕಾಟ ಪದೇ ಪದೇ ವರದಿಯಾಗುತ್ತಲೇ ಇವೆ.

ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ, ದೇಶದ ಸಶಸ್ತ್ರ ಪಡೆಗಳ ಮಹಾ ದಂಡ ನಾಯಕ ಜನರಲ್ ಬಿಪಿನ್ ರಾವತ್ ಸೇರಿದಂತೆ ರಾಜಕೀಯ ನಾಯಕರು, ಭದ್ರತಾಪಡೆಗಳ ಮುಖ್ಯಸ್ಥರು, ವಾಣಿಜ್ಯೋದ್ಯಮಿಗಳು, ಕ್ರೀಡಾ ಕ್ಷೇತ್ರದ ವಿವಿಧ ಖ್ಯಾತನಾಮರು, ಚಿತ್ರ ತಾರೆಯರು ಸೇರಿದಂತೆ 1,350ಕ್ಕೂ ಹೆಚ್ಚು ಗಣ್ಯರ ಬಗ್ಗೆ ರಹಸ್ಯ ಮಾಹಿತಿ ಸಂಗ್ರಹ ನಡೆಸಿ ವಿವರಗಳನ್ನು ಚೀನಾ ಇತ್ತೀಚೆಗೆ ಕಲೆ ಹಾಕಿದೆ.

Facebook Comments