ಬಸ್‍ನನ್ನೇ ನುಂಗಿದ ರಸ್ತೆ ಗುಂಡಿ: 6 ಸಾವು, 10 ಮಂದಿ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಜ.14-ಬೃಹತ್ ರಸ್ತೆ ಗುಂಡಿಯೊಂದು(ಸಿಂಕ್ ಹೋಲ್) ಬಸ್‍ನನ್ನೇ ನುಂಗಿ ಭೂಮಿ ಒಳಗೆ ಸ್ಫೋಟಗೊಂಡ ಕಾರಣ ಆರು ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವ ಘಟನೆ ಇಂದು ಮುಂಜಾನೆ ಚೀನಾದಲ್ಲಿ ಸಂಭವಿಸಿದೆ. ಮೃತಪಟ್ಟವರಲ್ಲಿ ಕೆಲವು ಪಾದಚಾರಿಗಳೂ ಸಹ ಸೇರಿದ್ದಾರೆ. ಈ ಘಟನೆಯಲ್ಲಿ ಹಲವು ಮಂದಿಗೆ ಗಾಯಗಳಾಗಿವೆ.

ಚೀನಾದ ಕ್ವಿಂಗ್‍ಹೈ ಪ್ರಾಂತ್ಯದ ರಾಜಧಾನಿ ಶಿನಿಂಗ್‍ನಲ್ಲಿ ಮುಂಜಾನೆ 5.30ರಲ್ಲಿ ಈ ದುರ್ಘಟನೆ ಸಂಭವಿಸಿದೆ.  ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ ಸಿಂಕ್ ಹೋಲ್ ಒಳಗೆ ಸಿಲುಕಿತು. ಬಸ್‍ನ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಗುಂಡಿ ನುಂಗಿ ಒಳಗೆ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿತು. ಈ ದುರ್ಘಟನೆಯಲ್ಲಿ ಅರು ಮಂದಿ ಮೃತಪಟ್ಟಿದ್ದಾರೆ. ಇತರ 10 ಮಂದಿ ಕಣ್ಮರೆಯಾಗಿದ್ದು, ಗುಂಡಿಯೊಳಗೆ ನಾಪತ್ತೆಯಾಗಿರಬಹುದೆಂದು ಶಂಕಿಸಲಾಗಿದೆ.

ಬಸ್ ಅರ್ಧದಷ್ಟು ಸಿಂಕ್‍ಹೋಲ್‍ನಲ್ಲಿ ಸಿಲುಕಿರುವ ದೃಶ್ಯಗಳು ಸರ್ಕಾರಿ ಒಡೆತನ ಸಿಸಿಟಿವಿ ಬ್ರಾಡ್‍ಕಾಸ್ಟಿಂಗ್ ಸಂಸ್ಥೆ ಬಿತ್ತರಿಸಿದೆ. ದೊಡ್ಡ ಗುಂಡಿಯಿಂದ ಬಸ್‍ನನ್ನು ಹೊರತೆಗೆಯಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ.

ಚೀನಾದಲ್ಲಿ ಸಿಂಕ್‍ಹೋಲ್‍ಗಳು ಅಪರೂಪವೇನಲ್ಲ. ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಚೀನಾದ ನಗರಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ರಸ್ತೆಯ ಒಳಗೆ ಗುಂಡಿಗಳನ್ನು ನಿರ್ಮಿಸಲಾಗುತ್ತದೆ. ಆದರೆ ಇವುಗಳ ಕಳಪೆ ನಿರ್ವಹಣೆಯಿಂದಾಗಿ ಇಂಥ ದುರ್ಘಟನೆಗಳು ಮರುಕಳಿಸುತ್ತಲೇ ಇವೆ. ಹೆನಾನ್ ಪ್ರಾಂತ್ಯ ಸೇರಿದಂತೆ ಹಲವೆಡೆ ಇತ್ತೀಚೆಗೆ ಇಂಥ ದುರ್ಘಟನೆಗಳಲ್ಲಿ ಸಾವು-ನೋವು ಸಂಭವಿಸಿವೆ.

Facebook Comments