ಕುತಂತ್ರಿ ಚೀನಾದ ಕಳ್ಳಾಟ ಮತ್ತೊಮ್ಮೆ ಸಾಬೀತು..!

ಈ ಸುದ್ದಿಯನ್ನು ಶೇರ್ ಮಾಡಿ

ಲಡಾಖ್/ನವದೆಹಲಿ, ಜು.31- ಪೂರ್ವ ಲಡಾಖ್ ಗಡಿಯಲ್ಲಿ ಕ್ಯಾತೆ ತೆಗೆದು ವಿಶ್ವದ ಎದುರು ತೀವ್ರ ಮುಖಭಂಗಕ್ಕೆ ಒಳಗಾದ ಚೀನಾಗೆ ಇನ್ನೂ ಬುದ್ಧಿ ಬಂದಿಲ್ಲ. ಬದಲಿಗೆ ಇಂಡೋ-ಚೀನಾ ಗಡಿಯಲ್ಲಿ ಮತ್ತೆ ಕಳ್ಳಾಟ ಮುಂದುವರಿಸಿದೆ.

ಲಡಾಖ್ ಗಡಿಯ ಬಹುತೇಕ ನೆಲೆಗಳಿಂದ ತನ್ನ ಸೇನೆ ಸಂಪೂರ್ಣ ಹಿಂದಕ್ಕೆ ಸರಿದಿದೆ ಎಂಬ ಚೀನಾದ ಹೇಳಿಕೆ ಸುಳ್ಳು ಎಂಬುದು ಮತ್ತೊಮ್ಮೆ ದೃಢಪಟ್ಟಿದೆ.

ಲಡಾಖ್ ಗಡಿಯಿಂದ ಬಹುತೇಕ ಸೇನಾ ತುಕಡಿಗಳನ್ನು ಹಿಂದಕ್ಕೆ ಪಡೆಯಲಾಗಿದೆ ಎಂಬ ಚೀನಾ ಘೋಷಣೆ ಸರಿಯಲ್ಲ. ಇದು ಸಂಪೂರ್ಣ ಸುಳ್ಳು ಎಂದು ಭಾರತ ತಿಳಿಸಿದೆ.

ಚೀನಾದ ಈ ಹೇಳಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿರುವ ಭಾರತ, ಕಮ್ಯುನಿಸ್ಟ್ ದೇಶದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ)ಯ ಯೋಧರು ಪೂರ್ವ ಲಡಾಖ್ ಭಾಗದಿಂದ ಸಂಪೂರ್ಣವಾಗಿ ಹಿಂದಕ್ಕೆ ಸರಿದಿಲ್ಲ. ಇನ್ನೂ ಅಲ್ಲಿ ಚೀನಿ ಸೈನಿಕರು ನೆಲೆಸಿದ್ದಾರೆ ಎಂದು ತಿಳಿಸಿದೆ.

ಉಭಯ ದೇಶಗಳ ಸೇನೆ ಹಿಂದಕ್ಕೆ ಸರಿಯುವ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ. ಅದು ಪೂರ್ಣಗೊಂಡಿಲ್ಲ ಎಂದು ಭಾರತವು ಚೀನಾ ಹೇಳಿಕೆಯನ್ನು ನಿರಾಕರಿಸಿದೆ.

ಚೀನಾ ಎರಡು ದಿನಗಳ ಹಿಂದಷ್ಟೇ ಹೇಳಿಕೆ ನೀಡಿ ತನ್ನ ಸೇವನೆ ಲಡಾಖ್ ಗಡಿ ಪ್ರದೇಶಗಳಿಂದ ಸಂಪೂರ್ಣ ಹಿಂದಕ್ಕೆ ಸರಿದಿದೆ. ಗಡಿಯ ಬಹುತೇಕ ನೆಲೆಗಳಿಂದ ಭಾರತ ಮತ್ತು ಚೀನಾ ಮುಂಚೂಣಿ ಗಡಿ ಪಡೆಗಳು ನಿಷ್ಕ್ರಿಯವಾಗಿವೆ.

ಲಡಾಖ್ ಗಡಿಯಲ್ಲಿರುವ ನೆಲೆಗಳಿಂದ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂದು ತಿಳಿಸಿತ್ತು. ಚೀನಾದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ, ಚೀನಾ ಲಡಾಖ್‍ನ ಮುಂಚೂಣಿ ಸೇನಾ ನೆಲೆಗಳಿಂದ ಸಂಪೂರ್ಣ ಹಿಂದಕ್ಕೆ ಸರಿದಿಲ್ಲ.

ಉಭಯ ದೇಶಗಳು ತನ್ನ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿವೆ. ಚೀನಾ ಹೇಳಿರುವಂತೆ ಅದು ಸಂಪೂರ್ಣ ಪೂರ್ಣಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡೂ ದೇಶಗಳ ಉನ್ನತಾಧಿಕಾರಿಗಳು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಪರಿಸ್ಪರ ಶಾಂತಿ ಮಾತುಕತೆ ಮೂಲಕವೇ ಸಮಸ್ಯೆ ಇತ್ಯರ್ಥವಾಗಬೇಕು. ಭಾರತ-ಚೀನಾ ಸೇನಾಪಡೆಗಳು ಲಡಾಖ್ ಗಡಿಯಿಂದ ಹೇಗೆ ಸಂಪೂರ್ಣ ಹಿಂದಕ್ಕೆ ಸರಿಯಬೇಕೆಂಬ ಬಗ್ಗೆ ಸಮಗ್ರ ಚರ್ಚೆ ನಡೆಸಲಿವೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

Facebook Comments

Sri Raghav

Admin