ಚಂದ್ರನ ಮಣ್ಣು ತರಲು ಮಾನವ ರಹಿತ ರಾಕೆಟ್ ಉಡಾಯಿಸಿದ ಚೀನಾ
ಬೀಜಿಂಗ್, ನ.24- ಚಂದ್ರನ ಅಂಗಳಕ್ಕೆ ತೆರಳಿ ಮಣ್ಣಿನ ಮೇಲ್ಮೈ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ವಾಪಸಾಗುವ ಮಾನವ ರಹಿತ ರಾಕೆಟ್ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿರುವ ಚೀನಾ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.
ಹೈನಾನ್ ಪ್ರಾಂತ್ಯದ ವೆನ್ಚಾಂಗ್ ಉಡಾವಣಾ ಕೇಂದ್ರದಿಂದ ಹಾರಿಸಲಾದ ಚಾಂಗ್-ಐ-ಫೈವ್ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಕಾಲಿಟ್ಟಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.
ಚಂದ್ರನ ಮೇಲ್ಮೈ ಮಾದರಿಗಳನ್ನು ಸಂಗ್ರಹಿಸಿ ವಾಪಸ್ ತರುವುದು ಇದುವರೆಗೂ ಸವಾಲಿನ ಕೆಲಸವಾಗಿತ್ತು. ಇದೀಗ ಮಾನವ ರಹಿತ ರಾಕೆಟ್ ಚಂದ್ರನ ಅಂಗಳಕ್ಕೆ ತೆರಳಿ ಅಲ್ಲಿನ ಮೇಲ್ಮೈ ಮಾದರಿಗಳನ್ನು ವಾಪಸ್ ತರುವಲ್ಲಿ ಯಶಸ್ವಿಯಾಗುತ್ತಿರುವುದು ಚಂದ್ರನ ರಚನೆ ಮತ್ತು ವಿಕಾಸದಂತಹ ವಿಷಯಗಳ ಅಧ್ಯಯನಕ್ಕೆ ಸಹಕಾರಿಯಾಗಲಿದೆ.
ಚಂದ್ರನ ಅಧ್ಯಯನಕ್ಕಾಗಿ ಚೀನಾ ಕಳೆದ 2007ರಲ್ಲಿ ಚಾಂಗ್-ಇ -ಒನ್ ಯೋಜನೆ ಆರಂಭಿಸಿತ್ತು. ಅದರ ಮೂಲಕ ಬಾಹ್ಯಾಕಾಶ ಕ್ಷೇತ್ರದ ಸಂಶೋಧನೆಯಲ್ಲಿ ದಾಪುಗಾಲಿಡುತ್ತಿರುವ ಚೀನೀಯರು ಆ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.