ಕುತಂತ್ರಿ ಚೀನಾ ಹೊಸ ಕ್ಯಾತೆ: ಭಾರತೀಯ ಸೇನೆ ಮೊದಲು ಹಿಂದೆ ಸರಿಯಲು ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.17- ಪೂರ್ವ ಲಡಾಖ್‍ನ ಇಂಡೋ-ಚೀನಾ ಗಡಿ ಭಾಗದಲ್ಲಿ ಉದ್ಭವಿಸಿರುವ ಗಡಿ ಸಂಘರ್ಷ ಇತ್ಯರ್ಥಕ್ಕೆ ಉಭಯ ದೇಶಗಳ ನಡುವೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳು ಗೌಪ್ಯವಾಗಿ ಮುಂದುವರಿದಿರುವಾಗಲೇ ಕುತಂತ್ರಿ ಕಮ್ಯುನಿಸ್ಟ್ ದೇಶ ಹೊಸ ಕ್ಯಾತೆ ತೆಗೆದಿದೆ.

ವಾಸ್ತವ ನಿಯಂತ್ರಣ ರೇಖೆಯಿಂದ ಮೊದಲು ಭಾರತೀಯ ಸೇನಾಪಡೆಗಳು ಹಿಂದೆ ಸರಿಯಬೇಕು. ಆನಂತರವಷ್ಟೇ ಬಿಕ್ಕಟ್ಟು ನಿವಾರಣೆಗೆ ಮಾತುಕತೆ ಮುಂದುವರಿಸಲು ಸಾಧ್ಯ ಎಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಪಟ್ಟು ಹಿಡಿದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪೂರ್ವ ಲಡಾಖ್‍ನ ಪಾಂಗೋಮ್ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆಗೊಂಡಿರುವ ಭಾರತದ ಯುದ್ಧ ಟ್ಯಾಂಕರ್‍ಗಳು ಮತ್ತು ಭಾರೀ ಯುದ್ಧಾಸ್ತ್ರಗಳು ಮೊದಲು ಹಿಂದಕ್ಕೆ ಸರಿಯಬೇಕು. ಆನಂತರ ತಾನೂ ಹಿಂದಕ್ಕೆ ಸರಿಯುವುದಾಗಿ ಡ್ರ್ಯಾಗನ್ ಹೊಸ ಬೇಡಿಕೆ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಚೀನಾದ ಹೊಸ ಕ್ಯಾತೆಯಿಂದ ಉಭಯ ದೇಶಗಳ ನಡುವಣ ಮಾತುಕತೆ ಮತ್ತೆ ವಿಫಲಗೊಳ್ಳುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಕಳೆದ ಕೆಲವು ತಿಂಗಳುಗಳಿಂದಲೂ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಿರುವ ಚೀನಾದ ವಕ್ರಬುದ್ಧಿ ಈಗ ಮತ್ತೊಮ್ಮೆ ಸಾಬೀತಾಗಿದೆ.

Facebook Comments