”ಭಾರತದ ಮೇಲೆ ಚೀನಾ ಆಕ್ರಮಣಕಾರಿ ಮನೋಭಾವನೆ ಹೊಂದಿದೆ”

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಜು.15-ಲಡಾಕ್‍ನಲ್ಲಿ ಭಾರತೀಯ ಯೋಧರನ್ನು ಚಿತ್ರಹಿಂಸೆ ಮಾಡಿ ಹತ್ಯೆ ಮಾಡಿರುವುದಲ್ಲದೆ ದಕ್ಷಿಣ ಚೀನಾ ಸಮುದ್ರ ಹಾಗೂ ಹಾಂಗ್‍ಕಾಂಗ್ ವಿಚಾರದಲ್ಲಿ ಚೀನಾ ನಡೆದುಕೊಳ್ಳುತ್ತಿರುವ ರೀತಿ ಅತ್ಯಂತ ಕಠೋರವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಓ ಬ್ರಿಯಾನ್ ಅಭಿಪ್ರಾಯಪಟ್ಟಿದ್ದಾರೆ.

20 ಮಂದಿ ಭಾರತೀಯ ಯೋಧರನ್ನು ಚೀನಾ ಯೋಧರು ಮನಬಂದಂತೆ ಥಳಿಸಿ ಹತ್ಯೆ ಮಾಡಿರುವುದನ್ನು ನೋಡಿದರೆ ಭಾರತದ ಮೇಲೆ ಚೀನಾ ಆಕ್ರಮಣಕಾರಿ ಮನೋಭಾವನೆ ಹೊಂದಿದೆ ಎಂಬುದಕ್ಕೆ ಸೂಕ್ತ ಸಾಕ್ಷಿಯಾಗಿದೆ ಎಂದು ಬ್ರಿಯಾನ್ ಹೇಳಿದ್ದಾರೆ.

ಭಾರತ ಮತ್ತು ಚೀನಾದ ನಡುವೆ ವಿವಾದವಿದೆ. ಆದರೆ ಚೀನಾ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಚೀನಿಯರ ಮನೋಭಾವನೆ ಏನೆಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ ಎಂದಿದ್ದಾರೆ.

ಭಾರತದ ಮೇಲೆ ಚೀನಾ ಏನೇ ಆಕ್ರಮಣಕಾರಿ ನೀತಿ ಅನುಸರಿಸಿದರೂ ಭಾರತದೊಂದಿಗಿನ ಅಮೆರಿಕ ಬಾಂಧವ್ಯ ಉತ್ತಮವಾಗಿದೆ. ವಿಶ್ವದ ಅತ್ಯುತ್ತಮ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ಅಮೆರಿಕದ ಪರಮಾಪ್ತ ರಾಷ್ಟ್ರ ಎಂದು ಅವರು ಬಣ್ಣಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ ಅತ್ಯುತ್ತಮ ಬಾಂಧವ್ಯವಿದ್ದು, ಈ ಸ್ನೇಹವನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎಂದು ಬ್ರಿಯಾನ್ ಅವರು ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಅಮೆರಿಕ ಸಮುದ್ರದಲ್ಲಿ ಚೀನಾ ನಡೆ ಹಾಂಗ್‍ಕಾಂಗ್ ವಿಚಾರದಲ್ಲಿ ಆ ದೇಶದ ಧೋರಣೆ ಮತ್ತು ಭಾರತದ ಮೇಲಿನ ಆಕ್ರಮಣಕಾರಿ ಮನೋಭಾವನೆ ನೋಡಿದರೆ ಕಮ್ಯುನಿಸ್ಟ್ ರಾಷ್ಟ್ರ ಚೀನಾ ಯಾವ ರೀತಿಯ ನಡೆ ಅನುಸರಿಸುತ್ತಿದೆ ಎಂಬುದು ಇಡೀ ವಿಶ್ವಕ್ಕೆ ತಿಳಿದಿದೆ ಎಂದು ಹೇಳಿದ್ದಾರೆ.

ಬ್ರಿಯಾನ್ ಅವರ ಹೇಳಿಕೆ ಬೆನ್ನಲ್ಲೇ ಚೀನಾ ಅಧ್ಯಕ್ಷ ಕ್ಸಿ ಜಿಂಗ್‍ಪಿಂಗ್ ಅವರೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸುವ ಉದ್ದೇಶ ಹೊಂದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಸೋಂಕು ಹರಡಲು ಕಾರಣವಾಗಿರುವ ಚೀನಾ ದೇಶದೊಂದಿಗೆ ಯಾವುದೇ ರೀತಿಯ ಮಾತುಕತೆ ಅಸಾಧ್ಯ. ವಿಶ್ವ ಆರೋಗ್ಯ ಸಂಸ್ಥೆಯು ಚೀನಾ ತಾಳಕ್ಕೆ ಕುಣಿಯುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Facebook Comments

Sri Raghav

Admin