ಚೀನಾದ ಆರ್ಥಿಕತೆ ಮೇಲೂ ಪರಿಣಾಮ ಬೀರಿದ ಕೊರೋನಾ ವೈರಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೀಚಿಂಗ್, ಫೆ.5-ಒಂದೆಡೆ ಕೊರೋನಾ ವೈರಸ್‍ನಿಂದ ಕಂಗೆಟ್ಟಿರುವ ಚೀನಾಗೆ ಈಗ ಆರ್ಥಿಕ ಕುಸಿತದ ಆತಂಕ ಕಾಡಲಾರಂಭಿಸಿದೆ.ಕಳೆದ ಡಿಸೆಂಬ ರ್‍ನಲ್ಲಿ ಕೊರೋನಾ ಕಾಣಿಸಿಕೊಂಡು ಜನವರಿಯಲ್ಲಿ ವ್ಯಾಪಕವಾಗಿದೆ. ಅಂದಿನಿಂದ ಚೀನಾದಲ್ಲಿ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. 500ಕ್ಕೂ ಹೆಚ್ಚು ಜನ ಸಾವನ್ನಪ್ಪಿ, 24 ಸಾವಿರ ಜನರಿಗೆ ಸೋಂಕು ತಗುಲಿರುವುದರಿಂದ ದೇಶಾದ್ಯಂತ ಸಂಚಾರ ವ್ಯವಸ್ಥೆ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಆಕರ್ಷಕ ಪ್ರವಾಸಿತಾಣಗಳು ನಿರ್ಜನಗೊಂಡಿವೆ. ವ್ಯವಹಾರ ನಿಂತಿದೆ. ಶಾಲೆಗಳು, ಮನೋರಂಜನಾ ತಾಣಗಳು ಸ್ಥಗಿತಗೊಂಡಿವೆ. ಕೇಂದ್ರ ಉಭಯ್ ಪ್ರಾಂತ್ಯದಲ್ಲಿ ಸೋಂಕಿನ ಆತಂಕದಿಂದ ಸಂಪೂರ್ಣ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಹಂತ ಹಂತವಾಗಿ ದೇಶದ ಇತರ ನಗರಗಳ ಮೇಲೂ ಈ ರೀತಿಯ ನಿರ್ಬಂಧ ಹೇರಲಾಗುತ್ತಿದೆ. ಸಾಫ್ಟ್‍ವೇರ್ ಉದ್ಯಮದ ಪ್ರಮುಖ ತಾಣವಾದ ಅಲಿಬಾಬಾ ಸೇರಿದಂತೆ ಈಶಾನ್ಯ ಭಾಗದ ಕೈಗಾರಿಕಾ ವಲಯ ನಿಸ್ತೇಜಗೊಂಡಿದೆ.

ಜನವರಿಯಲ್ಲಿ ಹೊಸ ವರ್ಷಾಚರಣೆ ಅಂಗವಾಗಿ ಚೀನಾದಲ್ಲಿ ಸಾಕಷ್ಟು ರಜೆಗಳನ್ನು ಘೋಷಿಸಲಾಗಿತ್ತು. ಅದರಿಂದಾಗಿ ಉತ್ಪಾದನೆ, ವ್ಯವಹಾರಗಳ ಮೇಲೆ ಸಾಕಷ್ಟು ಪರಿಣಾಮ ಬಿದ್ದು, ತ್ರೈವಾರ್ಷಿಕ ಆರ್ಥಿಕತೆಯಲ್ಲಿ ಹಿನ್ನಡೆಯಾಗುವ ಅಂದಾಜುಗಳಿದ್ದವು. ಈಗ ಅದನ್ನೂ ಮೀರಿದ ಕೊರೋನಾ ವೈರಸ್‍ನಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ಪಾಶ್ರ್ವವಾಯು ಬಡಿದಂತಾಗಿದೆ.
ಕೂಡಲೇ ಸಂಚಾರ ವ್ಯವಸ್ಥೆ ಶುರು ಮಾಡಿ, ಚುರುಕಾಗಿ ಕೆಲಸ ಮಾಡದಿದ್ದರೆ ವಿಶ್ವದ ಅತಿ ದೊಡ್ಡ 2ನೇ ಆರ್ಥಿಕತೆಯ ದೇಶ ಚೀನಾ ಕುಗ್ಗಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಫೋರ್ಡ್ ಸೇರಿದಂತೆ ಬಹುತೇಕ ಆಟೋ ಮೊಬೈಲ್ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿವೆ. ವೈರಾಣು ನಿಯಂತ್ರಣಕ್ಕೆಬಂದರೆ ಮುಂದಿನ ವಾರದಿಂದ ಉತ್ಪಾದನಾ ಚಟುವಟಿಕೆಗಳು ಆರಂಭಗೊಳ್ಳುವ ನಿರೀಕ್ಷೆ ಇದೆ. ಸಾಂಕ್ರಾಮಿಕ ಸೋಂಕಿನ ಭಯದಿಂದಾಗಿ ಜನ ಮನೆಯಿಂದ ಹೊರಬರುತ್ತಿಲ್ಲ. ವ್ಯಾಪಾರಗಳು ನಡೆಯುತ್ತಿಲ್ಲ. ಆರ್ಥಿಕ ಚಟುವಟಿಕೆ ನಿಂತ ನೀರಾಗಿದೆ ಎಂಬ ಆತಂಕಗಳು ಕೇಳಿ ಬಂದಿವೆ.

ಕಾರುಗಳ ಉತ್ಪಾದನೆಯಲ್ಲಿ ಶೇ.2ರಷ್ಟು ಹಿನ್ನಡೆಯಾಗಿದೆ. ವರ್ಷದ ಆರಂಭದಲ್ಲಿ ಶೇ.6ರಷ್ಟು ಮಾರುಕಟ್ಟೆ ವಿಸ್ತರಣೆಯಾಗಬಹುದು ಎಂಬ ಅಂದಾಜಿಗೆ ಎದುರಾಗಿ ಶೇ.5.4ರಷ್ಟು ಕುಸಿತವಾಗಿದೆ. ಕಳೆದ ಮೂರು ದಶಕಗಳಲ್ಲೇ ಇದು ಅತ್ಯಂತ ಗಣನೀಯವಾದ ಕುಸಿತವಾಗಿದೆ.

2019ರ ಲೂನಾರ್ಕ್ ಹೊಸ ವರ್ಷದ ಸಂದರ್ಭದಲ್ಲಿ 150 ಬಿಲಿಯನ್‍ನ ವ್ಯಾಪಾರ-ವಹಿವಾಟು ದಾಖಲಾಗಿದ್ದವು. ಸಂಚಾರ ವ್ಯವಸ್ಥೆಯಿಂದ 73 ಬಿಲಿಯನ್ ಆದಾಯ ಸೃಷ್ಟಿಯಾಗಿತ್ತು. ಆದರೆ ಈ ವರ್ಷ ಇದೆಲ್ಲವೂ ಕುಸಿತವಾಗಿದೆ. ಬಟ್ಟೆ, ಪಾದರಕ್ಷೆಯಂತಹ ವ್ಯವಹಾರಗಳು ಕೂಡ ಹಿನ್ನಡೆ ಅನುಭವಿಸುತ್ತಿವೆ. ಸರಿಸುಮಾರು 200 ಬಿಲಿಯನ್‍ಗೂ ಹೆಚ್ಚು ಆರ್ಥಿಕ ನಷ್ಟವನ್ನು ಈವರೆಗೂ ಅಂದಾಜಿಸಲಾಗಿದ್ದು, ಮುಂದೆ ಇನ್ನಷ್ಟು ಸಮಸ್ಯೆ ಎದುರಾಗುವ ಲೆಕ್ಕಾಚಾರವಿದೆ.

Facebook Comments