ಚಿಂಚೋಳಿ-ಕುಂದಗೋಳ ಬೈಎಲೆಕ್ಷನ್‍ನಲ್ಲಿ ಭರ್ಜರಿ ವೋಟಿಂಗ್, ಶೇ.75ರಷ್ಟು ಮತದಾನ ನಿರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಮೇ.19- ರಾಜ್ಯ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿಗೆ ಕಾರಣ ಎನ್ನಲಾದ ಕುಂದಗೋಳ ಹಾಗೂ ಚಿಂಚೋಳಿ ಉಪಚುನಾವಣೆಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತ ಮತ್ತು ಮತದಾನ ಭರ್ಜರಿಯಾಗಿ ಸಾಗಿತ್ತು.

ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುತ್ತಿರುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಂಡು ಬಂತು. ಸೂರ್ಯನ ತಾಪಮಾನ ಹೆಚ್ಚಾಗುವ ಕಾರಣದಿಂದಾಗಿ ಬೆಳಗಿನ ಸಮಯದಲ್ಲೇ ಮತದಾನ ಬಿರುಸಿನಿಂದ ಸಾಗಿದ್ದು, ಮಧ್ಯಾಹ್ನದ ವೇಳೆ ಕೊಂಚ ತಗ್ಗಿತ್ತು. 3 ಗಂಟೆಯ ನಂತರ ಮತ್ತೆ ಚುರುಕು ಪಡೆದುಕೊಂಡಿತ್ತು.

ಕುಂದಗೋಳ 241, ಚಿಂಚೋಳಿ 214 ಮತಗಟ್ಟೆಗಳಲ್ಲಿ ನಡೆದ ಮತದಾನ ಶಾಂತಿಯುತವಾಗಿತ್ತು. ಸಣ್ಣ ಪುಟ್ಟ ಮಾತಿನ ಚಕಮಕಿ, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ವಾಗ್ವಾದ, ಆರಂಭದಲ್ಲಿ ಕೈ ಕೊಟ್ಟ ಮತಯಂತ್ರ, ಕೆಲವೆಡೆ ಮತದಾನ ವಿಳಂಬ ಇಂತಹ ಘಟನೆ ಹೊರತುಪಡಿಸಿದರೇ ಮತ್ತ್ಯಾವ ಅಹಿತಕರ ಘಟನೆಗಳು ನಡೆಯಲಿಲ್ಲ.

ಚಿಂಚೋಳಿಯ ಕೂಡ್ಲಾ ಗ್ರಾಮದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಕೋಡ್ಲಾ, ಅಗಸಿ ಗ್ರಾಮಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಆಗಮಿಸಿದಾಗ ಬಿಜೆಪಿ ಪರವಾಗಿ ಘೋಷಣೆ ಕೂಗಿದರು.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಜಯಘೋಷ ಹಾಕಿದಾಗ ಪರಸ್ಪರ ಮಾತಿನ ಚಕಮಕಿ ನಡೆಯಿತು. ಸುಭಾಶ್ ರಾಠೋಡ್ ಅವರನ್ನು ಬೇರೆ ಕಡೆ ಕಳುಹಿಸಿದರೂ ಘೋಷಣೆಗಳು ನಿಲ್ಲಲಿಲ್ಲ. ಎರಡೂ ಕಡೆಯವರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಸ್ಥಳೀಯ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಿ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದರು. ಇನ್ನು ಕುಂದಗೋಳದ ಯರಗುಪ್ಪಿಯಲ್ಲಿ ನಿನ್ನೆ ಇಬ್ಬರು ಸಾವನ್ನಪ್ಪಿದ ಪರಿಣಾಮ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin