ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಚಿನ್ನೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Chinnegowda--01

ಬೆಂಗಳೂರು, ಜೂ.27- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಎಸ್.ಎ.ಚಿನ್ನೇಗೌಡರು ಇಂದು ಅಧಿಕಾರ ಸ್ವೀಕರಿಸಿದರು. ಮಂಡಳಿಯ ಮೂರು ವಲಯಗಳಿಗೆ ನಿನ್ನೆ ಚುನಾವಣೆ ನಡೆದು ಸಂಜೆ ಫಲಿತಾಂಶ ಪ್ರಕಟವಾಗಿ ಚಿನ್ನೇಗೌಡರು ಭಾರೀ ಅಂತರದಿಂದ ಮಾರ್ಸ್ ಸುರೇಶ್ ಅವರ ವಿರುದ್ಧ ಗೆಲುವು ಸಾಧಿಸಿ ಮಂಡಳಿಯ ನೂತನ ಅಧ್ಯಕ್ಷರಾಗಿ ಚುನಾಯಿತಗೊಂಡರು. ಮಂಡಳಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಲಯ ಸಮಿತಿ ಸದಸ್ಯರು, ಸ್ಟುಡಿಯೋ ಲ್ಯಾಬೊರೇಟರಿ ಸದಸ್ಯರನ್ನೊಳಗೊಂಡಂತೆ ಗೆದ್ದ ಎಲ್ಲ ಅಭ್ಯರ್ಥಿಗಳು ಇಂದು ವಾಣಿಜ್ಯ ಮಂಡಳಿಗೆ ಆಗಮಿಸಿ ನೂತನ ಅಧ್ಯಕ್ಷರ ಸಮ್ಮುಖದಲ್ಲಿ ಅಧಿಕಾರ ವಹಿಸಿಕೊಂಡರು.

ಇದೇ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಸಾ.ರಾ.ಗೋವಿಂದು ಅವರು ನೂತನ ಅಧ್ಯಕ್ಷ ಚಿನ್ನೇಗೌಡರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು. ಈ ವೇಳೆ ಸಾ.ರಾ.ಗೋವಿಂದು ಮಾತನಾಡಿ, ಅಣ್ಣಾವ್ರ ಕುಟುಂಬದಿಂದ ಯಾರೊಬ್ಬರೂ ಅಧ್ಯಕ್ಷಗಾದಿಗೆ ಇದುವರೆಗೆ ಸ್ಪರ್ಧಿಸಿರಲಿಲ್ಲ. ಇದೇ ಪ್ರಥಮ ಬಾರಿಗೆ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ ಎಂದು ಶ್ಲಾಘಿಸಿದರು.

ಚಿತ್ರರಂಗದಲ್ಲಿ ಬಹಳಷ್ಟು ಸೇವೆ ಮಾಡುವ ತವಕ ಹೊಂದಿರುವ ಚಿನ್ನೇಗೌಡರಿಗೆ ನಮ್ಮೆಲ್ಲರ ಸಹಕಾರ ಇದ್ದೇ ಇರುತ್ತದೆ ಎಂದು ಹೇಳಿದರು. ಮಂಡಳಿಯ ಎಲ್ಲ ವಿಭಾಗದವರು ನೂತನ ಅಧ್ಯಕ್ಷರಿಗೆ ಸಹಕಾರ ನೀಡಬೇಕು. ಚಲನಚಿತ್ರ ವಾಣಿಜ್ಯ ಮಂಡಳಿಯ ಹೆಸರಿಗೆ ಚ್ಯುತಿ ಬಾರದಂತೆ ಎಲ್ಲ ಸದಸ್ಯರೂ ಕೆಲಸ ಮಾಡಬೇಕು ಎಂದು ಸಾ.ರಾ.ಗೋವಿಂದು ಮನವಿ ಮಾಡಿದರು.

ಚಿನ್ನೇಗೌಡರು ಮಾತನಾಡಿ, ನಾನು ಈ ಗಾದಿಗೆ ಬರಲು ನನ್ನ ಅಕ್ಕ ಪಾರ್ವತಮ್ಮ , ನಮ್ಮ ಭಾವ ಡಾ.ರಾಜ್‍ಕುಮಾರ್ ಅವರ ಆಶೀರ್ವಾದ ಕಾರಣ. ನನಗೆ ಮತ ಹಾಕಿದ ಎಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ. ಯಾವುದೇ ಭಿನ್ನಮತವಿಲ್ಲದೆ ಒಗ್ಗೂಡಿ ಕೆಲಸ ಮಾಡೋಣ ಎಂದು ಹೇಳಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಿನಿಮಾ ರಂಗದಲ್ಲೂ ಇರುವುದರಿಂದ ಚಿತ್ರೋದ್ಯಮದ ಕಷ್ಟಗಳು ಅವರಿಗೆ ಗೊತ್ತಿರುತ್ತದೆ. ಅವರನ್ನು ಭೇಟಿ ಮಾಡಿ ನಮ್ಮ ಬೇಡಿಕೆಗಳನ್ನು ಮುಂದಿಟ್ಟು ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳೋಣ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಸ್ಟಾರ್ ನಟರಾದ ಶಿವಣ್ಣ, ದರ್ಶನ್, ಪುನೀತ್, ಯಶ್, ಸುದೀಪ್ ಸೇರಿದಂತೆ ಎಲ್ಲ ಕಲಾವಿದರು ವರ್ಷಕ್ಕೆ 3 ರಿಂದ 4 ಚಿತ್ರ ಮಾಡಿದರೆ ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರಗಳ ಹಾವಳಿ ತಡೆಗಟ್ಟಬಹುದು ಎಂದು ಹೇಳಿದರು.

ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆಯಾದರೆ ನಮ್ಮ ಚಿತ್ರೋದ್ಯಮ ಗಟ್ಟಿಯಾಗಿ ನಿಲ್ಲುತ್ತದೆ. ಇದನ್ನು ನಾವೆಲ್ಲರೂ ಮನಗಾಣಬೇಕು ಎಂದರು. ಗೆದ್ದ ಎಲ್ಲ ಅಭ್ಯರ್ಥಿಗಳಿಗೂ ನೂತನ ಅಧ್ಯಕ್ಷ ಚಿನ್ನೇಗೌಡರು ಶುಭ ಕೋರಿ, ನೀವೆಲ್ಲರೂ ನನ್ನೊಂದಿಗೆ ಇದ್ದು ಕೆಲಸ ಮಾಡಬೇಕೆಂದು ಮನವಿ ಮಾಡಿದರಲ್ಲದೆ, ಚಿತ್ರೋದ್ಯಮದ ಏಳಿಗೆಗೆ ನಾವೆಲ್ಲರೂ ಶ್ರಮಿಸೋಣ ಎಂದು ನುಡಿದರು.

Facebook Comments

Sri Raghav

Admin