ಧ್ರುವ ಫಾರಂ ಹೌಸ್‍ನಲ್ಲಿ ಚಿರಂಜೀವಿ ಅಂತ್ಯಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.8- ನಿನ್ನೆ ಹೃದಯಾಘಾತದಿಂದ ಚಿರ ನಿದ್ರೆಗೆ ಜಾರಿದ ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಕನಕಪುರ ರಸ್ತೆಯ ನೆಲಗುಳಿ ಗ್ರಾಮದ ಧ್ರುವ ಫಾರಂ ಹೌಸ್‍ನಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಇಂದು ನೆರವೇರಲಿದೆ.

ಇಂದು ಮಧ್ಯಾಹ್ನ ಪಾರ್ಥೀವಶರೀರವನ್ನು ಬಸವನಗುಡಿಯ ಚಿರು ನಿವಾಸದಿಂದ ಕನಕಪುರ ರಸ್ತೆಯ ಫಾರಂಹೌಸ್‍ಗೆ ಕೊಂಡೊಯ್ಯಲಾಯಿತು. ಅಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸಿ ಇಂದು ಸಂಜೆ ಅಂತ್ಯಸಂಸ್ಕಾರ ಮಾಡಲಾಗುವುದು.

ಲಾಕ್‍ಡೌನ್ ನಿಯಮಗಳ ಶಿಷ್ಟಾಚಾರದಂತೆ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಅವರ ಸಹೋದರ ಧ್ರುವ ಸರ್ಜಾ, ಮಾವ ಅರ್ಜುನ್ ಸರ್ಜಾ, ಪತ್ನಿ ಮೇಘನಾ ರಾಜ್, ತಾಯಿ ಅಮ್ಮಾಜಿ, ತಂದೆ ವಿಜಯ್‍ಕುಮಾರ್, ಪ್ರಮಿಳಾ ಜೋಷಾಯ್, ಸುಂದರ್‍ರಾಜ್ ಸೇರಿದಂತೆ ಅಪಾರ ಬಂಧು-ಬಳಗ, ಅಭಿಮಾನಿಗಳು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಿನ್ನೆ ಚಿರಂಜೀವಿ ಸರ್ಜಾ ಅವರ ಸಾವಿನ ಸುದ್ದಿ ಕೇಳಿದ ಕೂಡಲೇ ಚಿತ್ರರಂಗದವರು ಕೊರೊನಾ ಭೀತಿಯನ್ನು ಪಕ್ಕಕ್ಕಿಟ್ಟು ಆಸ್ಪತ್ರೆಗೆ ಧಾವಿಸಿದರು. ಶಿವರಾಜ್ ಕುಮಾರ್, ತಾರಾ, ಉಪೇಂದ್ರ, ಸುದೀಪ್, ದರ್ಶನ್, ಸುಮಲತಾ, ಅಭಿಷೇಕ್, ರಾಘವೇಂದ್ರ ರಾಜ್‍ಕುಮಾರ್, ವಿನಯ್ ರಾಜ್‍ಕುಮಾರ್, ಗಣೇಶ್, ಜಗ್ಗೇಶ್, ದ್ವಾರಕೀಶ್, ಸುಧಾರಾಣಿ, ವಶಿಷ್ಟ ಸಿಂಹ, ಸೃಜನ್ ಲೋಕೇಶ್, ದುನಿಯಾ ವಿಜಿ, ಗುರುಕಿರಣ್, ಸಾ.ರಾ.ಗೋವಿಂದು, ಮುನಿರತ್ನ, ಕೆ.ಮಂಜು, ನಾಗತಿಹಳ್ಳಿ ಚಂದ್ರಶೇಖರ್, ಹರ್ಷಿಕಾ ಪೂಣಚ್ಚ ಮುಂತಾದ ಹಲವರು ಅಗಲಿದ ಸ್ನೇಹ ಜೀವಿಗೆ ಅಂತಿಮ ನಮನ ಸಲ್ಲಿಸಿದರು.

ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಲವರು ಬಂದು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.ಇಂದು ಬೆಳಗ್ಗೆಯೂ ಕೂಡ ಅಗಲಿದ ಸ್ನೇಹಿತನ ಅಂತಿಮ ದರ್ಶನ ಪಡೆಯಲು ತಾರಾ ಬಳಗವೇ ನೆರೆದಿತ್ತು.

Facebook Comments