ಮಾನಸಿಕ ಒತ್ತಡವೇ ಚಿರಂಜೀವಿ ಸರ್ಜಾಗೆ ಮುಳುವಾಯಿತೆ..?

ಈ ಸುದ್ದಿಯನ್ನು ಶೇರ್ ಮಾಡಿ

ಭೀಕರ ಕೊರೊನಾಘಾತಕ್ಕೆ ಇಡೀ ವಿಶ್ವವೇ ಕಂಗಾಲಾಗಿದೆ. ಜನ ಸಾಮಾನ್ಯರಿಗೆ ದೇವತೆಗಳು, ಗಂಧರ್ವರ ಹಾಗೆ ಗೋಚರಿಸುವೆ ಸಿನಿಮಾ ಸೆಲಬ್ರೆಟಿಗಳೂ ಕೋವಿಡ್ ದಾಳಿಯಿಂದ ನಲುಗಿದ್ದಾರೆ.

ಸಿನಿಮಾ ಕಲಾವಿದರು ಸದಾ ಜನರ ಗಮನದಲ್ಲಿರಲು ಬಯಸುತ್ತಾರೆ. ಜನ ಇಲ್ಲದಿದ್ದರೆ ಜನಪ್ರಿಯತೆ ಇಲ್ಲ. ಜನಪ್ರಿಯತೆ ಇಲ್ಲದವರಿಗೆ ಫೇಸ್ ವ್ಯಾಲ್ಯೂ, ಮಾರ್ಕೆಟ್ ಇರುವುದಿಲ್ಲ. ಕೋವಿಡ್ ಲಾಕ್‍ಡೌನ್ ಫಲವಾಗಿ ಕಳೆದ ಹಲವು ದಿನಗಳಿಂದ ಸಿನಿಮಾ ಚಟುವಟಿಕೆಗಳು ಸ್ತಬ್ಧವಾಗಿವೆ.

ಚಿತ್ರೀಕರಣದಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದ ನಟ-ನಟಿಯರು ತಮ್ಮ ಮನೆಗಷ್ಟೇ ಸೀಮಿತವಾಗಿದ್ದಾರೆ.ಇದು ಅವರ ಆತಂಕ. ಅಭದ್ರತೆಯನ್ನು ಹೆಚ್ಚಿಸಿದೆ. ಕೆಲವರು ಅತೀವ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಆದರೆ, ಯಾರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ.

ಕೊರೊನಾ ಲಾಕ್‍ಡೌನ್ ಅವಯಲ್ಲಿ ಇರ್ಫಾನ್‍ಖಾನ್, ರಿಷಿಕಪೂರ್, ನಿರ್ದೇಶಕ ಬಸುಚಟರ್ಜಿ, ಸಂಗೀತ ನಿರ್ದೇಶಕ ವಾಜಿದ್‍ಖಾನ್, ಛಾಯಾಗ್ರಾಹಕ ಶ್ರೀಕಾಂತ್, ಫೈನಾನ್ಸಿಯರ್ ಮೋಹನ್ ನಕ್ಕೋಡಿ, ನಟ ಬುಲೆಟ್ ಪ್ರಕಾಶ್, ಮೈಕಲ್ ಮಧು ಸೇರಿದಂತೆ ಚಿತ್ರರಂಗದ ಹಲವರು ಅಸುನೀಗಿದ್ದಾರೆ.

ಇವರೆಲ್ಲರ ಪಾಲಿಗೆ ಮಾನಸಿಕ ಒತ್ತಡವೊಂದೇ ಕಾರಣ ಎಂದು ಹೇಳಲಾಗದು. ಬೇರೆ ಬೇರೆ ಕಾರಣಗಳಿರಬಹುದು. ಅದರ ನಡುವೆ ಒತ್ತಡದ ಸಣ್ಣ ಎಳೆ ಇದ್ದೇ ಇರುತ್ತದೆ.

ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ಅವರ ಹಠಾತ್ ಮರಣವು ಚಿತ್ರರಂಗದವರಿಗೆ ದೊಡ್ಡ ಆಘಾತನೀಡಿದೆ. ಚಿರಂಜೀವಿ ಸರ್ಜಾ ಅವರು ಆರೋಗ್ಯವಂತರಾಗಿ ಚಟುವಟಿಕೆಯಿಂದ ಕೆಲಸ ಮಾಡಿಕೊಂಡಿದ್ದರು.

ಲಾಕ್‍ಡೌನ್ ತೆರೆದನಂತರ ಅವರ ಮೂರು ಸಿನಿಮಾಗಳಿಗೆ ಚಾಲನೆ ಸಿಗಬೇಕಾಗಿತ್ತು. ಕೈ ತುಂಬಾ ಕೆಲಸ ಇದ್ದರೂ ಕೂಡ ಚಿರಂಜೀವಿ ಸರ್ಜಾ ಅವರನ್ನು ಸಣ್ಣ ಕೊರಗು ಕಾಡುತ್ತಿತ್ತು. ನಮ್ಮ ಕನಸು ನನಸಾಗಬಾರದೇ ಎಂದು ಕಾತರಿಸುತ್ತಿದ್ದರು.

ಚಿರಂಜೀವಿ ಸರ್ಜಾ ಅವರು ತಮ್ಮ ಅಭಿನಯದ ಶಿವಾರ್ಜುನ ಚಿತ್ರದ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದರು. ಆದರೆ, ದುರದೃಷ್ಟವಶಾತ್ ಆ ಚಿತ್ರ ತೆರೆ ಕಂಡ ಎರಡು ಮೂರು ದಿನಗಳಲ್ಲೇ ಲಾಕ್‍ಡೌನ್ ಘೋಷಣೆ ಆಯಿತು. ಇದರಿಂದ ಸರ್ಜಾ ಅವರಿಗೆ ಘಾಸಿ ಆಯಿತು. ಆ ನೋವು ಅವರ ಮನದಂಗಳದಲ್ಲಿ ಮಡುಗಟ್ಟಿತ್ತು.

ಚಿರಂಜೀವಿ ಸರ್ಜಾ ಅವರು ಸಿನಿಮಾ ಕುಟುಂಬದವರಿಂದ ಬಂದವರು. ತಾತ ಶಕ್ತಿ ಪ್ರಸಾದ್, ಸೋದರ ಮಾವ ಅರ್ಜುನ್ ಸರ್ಜಾ, ಸೋದರ ಧ್ರುವ ಸರ್ಜಾ, ಪತ್ನಿ ಮೇಘನಾ ರಾಜ್, ಮಾವ ಸುಂದರ್‍ರಾಜ್, ಅತ್ತೆ ಪ್ರಮಿಳಾ ಜೋಷಾಯ್, ಸೋದರ ಸೊಸೆ ಐಶ್ವರ್ಯ ಹೀಗೆ ಎಲ್ಲರೂ ಚಿತ್ರರಂಗದಲ್ಲಿ ಹೆಸರು ಮಾಡಿರುವವರು.

ಹಾಗಾಗಿ ಚಿತ್ರರಂಗದ ಏಳು-ಬೀಳುಗಳನ್ನು ಚಿರು ತುಂಬಾ ಹತ್ತಿರದಿಂದ ನೋಡಿದ್ದರು. ಆದರೆ, ತಾನೇ ಸ್ವತಃ ಒತ್ತಡವನ್ನು ಹತ್ತಿಕ್ಕಿಕೊಳ್ಳಲು ಕಷ್ಟವಾಯಿತು. ಆ ಒತ್ತಡವೇ ತೀವ್ರ ಹೃದಯಾಘಾತಕ್ಕೆ ಕಾರಣವಾಯಿತು ಎಂದು ಹೇಳಲಾಗದು. ಆದರೆ, ಅದರ ಪಾತ್ರವಂತೂ ಇದೆ ಎಂದು ಆತ್ಮೀಯರು ಹೇಳುತ್ತಾರೆ.

ಚಿರು ಸ್ನೇಹ ಜೀವಿ. ಚಿತ್ರರಂಗದ ಎಲ್ಲರೊಂದಿಗೆ ಆತ್ಮೀಯತೆ ಹೊಂದಿದ್ದರು. ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಮೇಘನಾರನ್ನು ಎರಡು ವರ್ಷಗಳ ಹಿಂದಷ್ಟೇ ವರಿಸಿದ್ದರು. ಸದ್ಯದಲ್ಲೇ ತಂದೆಯಾಗಲಿದ್ದ ಚಿರು, ತಮ್ಮ ಮಗುವನ್ನು ಮುದ್ದಾಡುವ ಅವಕಾಶದಿಂದ ವಂಚಿತರಾದರು. ಎಲ್ಲಾ ವಿಯ ಆಟ.

ಚಿರಂಜೀವಿ ಸರ್ಜಾ ಅವರ ಸಾವಿನ ಸುದ್ದಿ ಕೇಳಿದ ಕೂಡಲೇ ಚಿತ್ರರಂಗದವರು ಕೊರೊನಾ ಭೀತಿಯನ್ನು ಪಕ್ಕಕ್ಕಿಟ್ಟು ಆಸ್ಪತ್ರೆಗೆ ಧಾವಿಸಿದರು. ಶಿವರಾಜ್ ಕುಮಾರ್, ತಾರಾ, ಉಪೇಂದ್ರ, ಸುದೀಪ್, ದರ್ಶನ್, ಸುಮಲತಾ, ಅಭಿಷೇಕ್, ರಾಘವೇಂದ್ರ ರಾಜ್‍ಕುಮಾರ್, ವಿನಯ್ ರಾಜ್‍ಕುಮಾರ್, ಗಣೇಶ್, ಜಗ್ಗೇಶ್, ದ್ವಾರಕೀಶ್, ಸುಧಾರಾಣಿ, ವಷಿಷ್ಟ ಸಿಂಹ, ಸೃಜನ್ ಲೋಕೇಶ್, ದುನಿಯಾ ವಿಜಿ, ಗುರುಕಿರಣ್, ಸಾ.ರಾ.ಗೋವಿಂದು, ಮುನಿರತ್ನ, ಕೆ.ಮಂಜು, ನಾಗತಿಹಳ್ಳಿ ಚಂದ್ರಶೇಖರ್, ಹರ್ಷಿಕಾ ಪೂಣಚ್ಚ ಮುಂತಾದ ಹಲವರು ಅಗಲಿದ ಸ್ನೇಹ ಜೀವಿಗೆ ಅಂತಿಮ ನಮನ ಸಲ್ಲಿಸಿದರು. ಚಿರು ಅವರ ಶವ ಪೆಟ್ಟಿಗೆಗೆ ದರ್ಶನ್ ಮತ್ತು ಸೃಜನ್ ಹೆಗಲು ಕೊಟ್ಟಿದ್ದು ನೋಡುಗರ ಮನ ಕಲಕಿತು.

ಮೇಘನಾ ಮತ್ತು ಪ್ರಮಿಳಾ ಜೋಷಾಯ್ ಅವರ ಆಕ್ರಂದನ ಸಂತೈಕೆಗೆ ನಿಲುಕಲಿಲ್ಲ. ಈ ವರ್ಷ ಚಿತ್ರರಂಗಕ್ಕೆ ಆಘಾತದ ಮೇಲೆ ಆಘಾತ. ಆರ್ಥಿಕವಾಗಿ ಅಪಾರ ನಷ್ಟ ಅನುಭವಿಸಿರುವ ಚಿತ್ರರಂಗಕ್ಕೆ ಚಿರಂಜೀವಿ ಸರ್ಜಾರಂತಹ ಯುವ ನಟನ ನಿಧನದಿಂದ ದೊಡ್ಡ ಹೊಡೆತ ಬಿದ್ದಿದೆ.

ವಿನಿಯಮಕ್ಕೆ ತಲೆ ಬಾಗಲೇಬೇಕು. ಅದರ ಮುಂದೆ ಎಲ್ಲರೂ ಒಂದೇ ಪರಿಸ್ಥಿತಿ ಹೀಗೆಯೇ ಇರುವುದಿಲ್ಲ. ಮುಂದೊಂದು ದಿನ ಸುಧಾರಣೆ ಆಗುತ್ತದೆ. ಅಲ್ಲಿಯವರೆಗೆ ಸ್ಥೈರ್ಯ, ಧೈರ್ಯ ಕಳೆದುಕೊಳ್ಳಬಾರದು. ಅಗಲಿದ ಚಿರಂಜೀವಿ ಸರ್ಜಾ ಮರಳಿ ಬರುವುದಿಲ್ಲ. ಅವರಿಗೆ ಅಂತಿಮ ನಮನ.
– ಎನ್.ಎಸ್.ರಾಮಚಂದ್ರ

Facebook Comments

Sri Raghav

Admin