ಬಾರೋ ಸಂತೆಗೆ ಹೋಗೋಣಾ ‘ಚಿತ್ರ ಸಂತೆ’ ನೋಡೋಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರಿನಲ್ಲಿ ಸಂತೆಗಳೆಂದರೆ ಏನೋ ಆಕರ್ಷಣೆ. ಜನರು ಹೊಸತನ್ನು ಬಯಸಿ ಆ ಕಡೆಗೆ ನೋಡಿ ಬರೋಣವೆಂದು ಹೋಗಿಯೇ ಬಿಡುತ್ತಾರೆ. ಅದರಲ್ಲಿ ನವನವೀನ ಚಿತ್ರಗಳನ್ನು ಬಿಂಬಿಸುವ ಚಿತ್ರ ಸಂತೆಯೆಂದರೆ ಕೇಳಬೇಕೆ ವಾರದ ಕೊನೆದಿನ ತಮ್ಮ ಹಾಜರಿಯನ್ನು ಅಲ್ಲಿ ಹಾಕಿಯೇ ಬಿಡುತ್ತಾರೆ. ಏಕೆಂದರೆ, ಕರ್ನಾಟಕ ಚಿತ್ರಕಲಾ ಪರಿಷತ್ತಿನ 17ನೆ ಚಿತ್ರ ಸಂತೆಗೆ ಇನ್ನು ಬೆರಳೆಣಿಯಷ್ಟೇ ದಿನವಿರುವುದು. ಪ್ರತಿ ವರ್ಷದಂತೆ ಹಮ್ಮಿಕೊಂಡಿರುವ ವಾರ್ಷಿಕ ಚಿತ್ರ ಸಂತೆಗೆ ಹಲವಾರು ಕಲಾಸಕ್ತರು ಕಾಯುತ್ತ ಇರುವುದು ವಿಶೇಷವಲ್ಲ.

ಚಿತ್ರ ಸಂತೆಯ ಕಲ್ಪನೆ ಹುಟ್ಟಿದ್ದು ಹೇಗೆ: ಈ ಹಿಂದೆ ಹಳ್ಳಿಗಳಲ್ಲಿ ತಾವು ಬೆಳೆದ ತರಕಾರಿಗಳು, ಇನ್ನಿತರ ವಸ್ತುಗಳನ್ನು ವಾರದ ಕೊನೆಯ ದಿನ ಅಥವಾ ಬೇರೆ ದಿನ ನಿಗದಿತ ಸ್ಥಳದಲ್ಲಿ ಸಂತೆಯನ್ನಾಗಿ ಮಾಡಿ ಮಾರಾಟ ಮಾಡುವುದು ಸರ್ವೆ ಸಾಮಾನ್ಯ. ತಮಗೆ ಬೇಕಾದ ಎಲ್ಲವನ್ನೂ ಅವರು ಆ ದಿನ ಖರೀದಿಸುತ್ತಿದ್ದರು.

ಆದರೆ, ಕಾಲಕ್ರಮೇಣವಾಗಿ ಈ ಸಂತೆ ಮರೆಯಾಗುತ್ತಿದೆಯೇನೋ ಎನ್ನುವ ಕಾಲಘಟ್ಟದಲ್ಲಿ ಆ ಸಂತೆಯ ಮಾದರಿಯಲ್ಲಿಯೇ ಚಿತ್ರಸಂತೆಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತು ಕುಮಾರ ಕೃಪಾ ರಸ್ತೆಯಲ್ಲಿ ಆಯೋಜನೆ ಮಾಡುತ್ತಿದೆ. ಚಿತ್ರಕಲಾವಿದರಿಗೆ ಸಹಾಯ ಮಾಡುವ ದೃಷ್ಟಿಯಿಂದ ಮತ್ತು ಕಲಾವಿದರು ತಾವು ರಚಿಸಿದ ಶಿಲ್ಪಗಳು, ಚಿತ್ರಗಳು ಅದರಲ್ಲಿ ವಿಭಿನ್ನ ರೀತಿಯ ಕಲಾತ್ಮಕ ಚಿತ್ರ ಚಿತ್ತಾರಗಳು ಕೂಡ ಈ ಸಂತೆಯಲ್ಲಿ ನಮಗೆ ನೋಡಲು ಸಿಗುತ್ತಿವೆ.

ಪ್ರತಿ ವರ್ಷದಂತೆ ಚಿತ್ರಕಲಾ ಪರಿಷತ್ ಚಿತ್ರಸಂತೆ ಆಯೋಜಿಸಿದ್ದು, ಇಡೀ ಚಿತ್ರಕಲಾ ಪರಿಷತ್ತಿನಲ್ಲಿ ಕಲಾಲೋಕವೇ ಧರೆಗಳಿದು ಬಂದಂತೆ ಗೋಚರವಾಗುತ್ತದೆ. ಪರಿಷತ್ತಿನ ರಸ್ತೆಯ ತುಂಬ ಚಿತ್ರ ಚಿತ್ತಾರಗಳ ವೈಭವ ಒಂದು ಕ್ಷಣ ದಾರಿಯಲ್ಲಿ ಸಾಗುತ್ತಿದ್ದವರಿಗೆ ಕಲಾವಿದನು ರಚಿಸಿದ್ದ ಚಿತ್ತಾರಗಳು ಕಲಾ ಔತಣವನ್ನು ಉಣಬಡಿಸುವುದಂತು ಸತ್ಯ. ಅಚ್ಚರಿಯ ಕಲಾ ತಾಣವೇ ಧರೆಗಿಳಿದು ಬಂದ ಅನುಭವ ಒಂದು ಕ್ಷಣ ಬದುಕಿನ ಜಂಜಟ ಮರೆತು ಇಲ್ಲಿಯೇ ವಿಹರಿಸಿಬಿಡೋಣ ಎನ್ನುವಷ್ಟು ಸಂಭ್ರಮ ತುಂಬಿ ತುಳುಕುತ್ತಿರುತ್ತದೆ.

ಚಿತ್ರಸಂತೆ ನೇಗಿಲಯೋಗಿ ರೈತರಿಗೆ ಸಮರ್ಪಣೆ: ಪ್ರತಿ ವರ್ಷ ಚಿತ್ರಸಂತೆಯಲ್ಲಿ ಬೇರೆ ಬೇರೆ ರೀತಿಯ ವಿಷಯ ಆಧರಿಸಿ ಆಯೋಜಿಸಲಾಗುತ್ತಿದೆ. ಹೋದ ವರ್ಷ ಮಹಾತ್ಮಾ ಗಾಂಧಿಜೀಯವರಿಗೆ ಸಮರ್ಪಿಸಲಾಗಿತ್ತು. ಈ ವರ್ಷ ನೇಗಿಲಯೋಗಿ ರೈತನಿಗೆ ಸಮರ್ಪಣೆ ಮಾಡಲಾಗುತ್ತಿದೆ. ಕೃಷಿಯೂ ಒಂದು ಕಲೆಯಾಗಿದ್ದು, ಅಲ್ಲಿಯ ವೈವಿಧ್ಯತೆ, ರೈತರ ಸಂಕಷ್ಟಗಳು ರೈತರು ಎದುರಿಸುತ್ತಿರುವ ಸವಾಲುಗಳು. ಅವರ ಬದುಕು ಹೊಲದಲ್ಲಿ ಹಗಲು, ಬಿಸಿಲು, ಮಳೆ, ಚಳಿ ಲೆಕ್ಕಿಸದೆ ಕೆಲಸ ಮಾಡುವುದು. ಒಟ್ಟಾರೆ ರೈತರ ಬದುಕಿನ ಸಂಪೂರ್ಣ ಚಿತ್ರಣ ಚಿತ್ರಸಂತೆಯ ಮೆರಗು. ರೈತರೊಟ್ಟಿಗೆ ನಾವಿದ್ದೇವೆ ಎಂಬುದನ್ನು ತಿಳಿಸುವ ಮೂಲಕ ಈ ಚಿತ್ರಸಂತೆ ತನ್ನದೇ ಆದ ಮೆರುಗನ್ನು ಪಡೆದುಕೊಳ್ಳುತ್ತಿದೆ.

ನಮ್ಮ ಹಳ್ಳಿಯಲ್ಲಿ ಕೃಷಿ ಆಧಾರಿತ ಕುಟುಂಬಗಳಿವೆ. ಅವರಿಗೆ ಈ ವರ್ಷ ಚಿತ್ರಗಳ ಮೂಲಕ ನಮನ ಸಲ್ಲಿಸುವ ಕಾರ್ಯಕ್ರಮ ಚಿತ್ರಸಂತೆಯಲ್ಲಿ ಚಿತ್ರಗಳ ಮೂಲಕ ಸಮರ್ಪಣೆಯಾಗುತ್ತದೆ. ಒಟ್ಟಾರೆ, ಈ ವರ್ಷದ ಚಿತ್ರಸಂತೆ ರೈತಮಯ ನಿಸರ್ಗಮಯ, ಎಂದರೆ ಸುಳ್ಳಾಗಲಾರದು.

ವಾರ್ಷಿಕ ಕಲಾ ಸಂತೆ: ಎಲ್ಲರಿಗಾಗಿ ಕಲೆ ಈ ಕಲಾಸಂತೆಯ ಮುಖ್ಯವೇದ ವಾಕ್ಯ ಸರ್ವರಿಗೂ ಕಲಾಕೃತಿ ದೊರೆಯುವಂತಾಗಬೇಕು. ಕಲಾಸಕ್ತರು, ಬಂಧು ಕಲಾವಿದರ ಕಲಾಕೃತಿಗಳನ್ನು ಕೊಳ್ಳಬೇಕು, ಕಲಾವಿದರನ್ನು ಪ್ರೋತ್ಸಾಹಿಸಬೇಕು. ಎಲ್ಲರಿಗೂ ಕಲೆ ತಲುಪವಂತಾಗಬೇಕೆಂಬ ಉದ್ದೇಶದಿಂದ ಈ ಕಲಾಸಂತೆ ಆಯೋಜಿಸಲಾಗಿದೆ.  ಚಿತ್ರ ಸಂತೆಗೆ ಬೇರೆ ಬೇರೆ ಕಡೆಯಿಂದ ಕಲಾವಿದರು ಬರುವುದು ವಿಶೇಷ. ಒಂದೇ ಸೂರಿನಲ್ಲಿ ವಿಭಿನ್ನ ಕಲಾವಿದರನ್ನು ನೋಡುವ ಅವಕಾಶ ಕಲಾತ್ಮಕ ವಿಷಯಗಳನ್ನು ಚರ್ಚೆ ಮಾಡುವ ಮತ್ತು ವಿಚಾರ ವಿನಿಮಯ ಎಲ್ಲವೂ ಕೂಡ ಇಲ್ಲಿ ನಡೆಯುತ್ತದೆ.

ಕಲಾವಿದರಿಗೆ ಊಟ-ವಸತಿ ವ್ಯವಸ್ಥೆ: ಚಿತ್ರಸಂತೆಗೆ ಬರುವ ಕಲಾವಿದರಿಗೆ ಚಿತ್ರಕಲಾ ಪರಿಷತ್ ಉಚಿತವಾಗಿ ಊಟ ಮತ್ತು ವಸತಿಯ ವ್ಯವಸ್ಥೆ ಮಾಡುತ್ತದೆ. ಒಟ್ಟಾರೆ, ಕಲಾವಿದರನ್ನು ಬೆಳೆಸುವುದು, ಕಲೆ ಉಳಿಸುವುದು ಇದರ ಉದ್ದೇಶ. ಕಲಾವಿದರು ಬೇರೆ ಕಡೆಗೆ ಹೋಗಿ ವಸತಿ ಮಾಡಿಕೊಂಡು ವೆಚ್ಚ ಭರಿಸಲು ಕಷ್ಟವಾಗುತ್ತದೆ. ಅದಕ್ಕಾಗಿ ಚಿತ್ರಕಲಾ ಪರಿಷತ್ ವ್ಯವಸ್ಥೆ ಮಾಡುತ್ತಿದೆ. ಚಿತ್ರ ಕಲಾವಿದರಿಗೆ ಮಾರಾಟವಾಗುವ ಕಲಾಕೃತಿಗಳಿಗೆ ಚಿತ್ರಕಲಾ ಪರಿಷತ್ ಯಾವುದೇ ಕಮೀಷನ್‍ಅನ್ನು ಪಡೆದುಕೊಳ್ಳುವುದಿಲ್ಲ. ಕಲಾವಿದರಿಗೆ ಬೆಳೆಸಲು ಕಲೆಯನ್ನು ಉಳಿಸಲು ಶ್ರಮವಹಿಸುತ್ತಿದೆ. ಕಲಾವಿದರ ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗಬೇಕೆಂಬುದೇ ಇದರ ಉದ್ದೇಶ.

ಚಿತ್ರಸಂತೆಯ ದಿನ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಾರೆ. ಚಿತ್ರ ಕಲಾವಿದರಿಗೆ ಬೇಕಾಗುವ ಊಟ ನೀರು ಇನ್ನಿತರ ವಸ್ತುಗಳನ್ನು ಸ್ಥಳದಲ್ಲಿಯೇ ಅವರಿಗೆ ಪೂರೈಕೆ ಮಾಡುವುದು ಮತ್ತು ಅವರಿಗೆ ಅಗತ್ಯ ನೆರವು ನೀಡುತ್ತಾರೆ. ಅಂಗವಿಕಲ ಮತ್ತು ವಯಸ್ಸಾದ ಕಲಾವಿದರಿಗೆ ಚಿತ್ರಕಲಾ ಪರಿಷತ್ತಿನ ಆವರಣದೊಳಗೆ ಸ್ಟಾಲ್‍ಗಳನ್ನು ನೀಡಲಾಗಿದೆ.

ಚಿತ್ರಸಂತೆಯಲ್ಲಿ ಅಂಗವಿಕಲ ಮತ್ತು ವಯಸ್ಸಾದ ಚಿತ್ರಕಲಾವಿದರು ಪಾಲ್ಗೊಳ್ಳುವುದರಿಂದ ಅವರಿಗೆ ಅಂಗಡಿಗಳನ್ನು ಹಾಕಿ ಕಲಾಕೃತಿಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಇದರಿಂದ ಕಲಾವಿದರನ್ನು ಪ್ರೊತ್ಸಾಹಿಸಲಾಗುತ್ತದೆ. ಚಿತ್ರಸಂತೆಯಲ್ಲಿ ಒಂದು ಸಾವಿರದಿಂದ ಒಂದು ಲಕ್ಷದವರೆಗಿನ ಕಲಾಕೃತಿಗಳು ಮಾರಾಟವಾಗುತ್ತವೆ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಕಲಾಕೃತಿಗಳು ಸಿಗುವಂತಾಗಬೇಕು. ಎಲ್ಲರ ಮನೆ ಮನೆಗೆ ಒಂದೊಂದು ಕಲಾಕೃತಿಗಳನ್ನು ಒಯ್ಯಬೇಕು ಎಂಬ ಉದ್ದೇಶದಿಂದ ಚಿತ್ರಸಂತೆ ನಡೆಯುತ್ತದೆ.

ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಸಂತೆಯ ದಿನ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ ಅಲ್ಲದೆ ವಿವಿಧ ಶೈಲಿಯ ಸಾಂಪ್ರದಾಯಿಕ ಚಿತ್ರಗಳನ್ನು ನೋಡಬಹುದು. ಸುಮಾರು 2000ಕ್ಕಿಂತ ಹೆಚ್ಚಿನ ಕಲಾವಿದರು, ರಸ್ತೆ ತುಂಬ ಚಿತ್ರಗಳ ಮಳಿಗೆಗಳು, ಬೇರೆ ರಾಜ್ಯ ದೇಶದ ಕಲಾವಿದರು ಅದರ ಜತೆಗೆ ನಿಮ್ಮ ಭಾವ ಚಿತ್ರವನ್ನು ಒಂದು ಕ್ಷಣದಲ್ಲಿ ಚಿತ್ರಿಸಿಕೊಡುವ ಕಲಾವಿದರು. ಒಂದೇ ಎರಡೇ ಒಟ್ಟಾರೆ ಒಂದು ಕಲಾಲೋಕವೇ ಧರೆಗಿಳಿದು ಬಂದಂತೆ ವಿಭಿನ್ನ ಕಲಾತ್ಮಕ ವಾತಾವರಣಕ್ಕೆ ಸಾಕ್ಷಿಯಾಗಲಿದೆ.

ಚಿತ್ರಸಂತೆಯ ಮೊದಲ ದಿನದಂದು ಅಂದರೆ ಜ.4ರ 2020ರಂದು ಒಟ್ಟು 5 ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲಾಗುತ್ತದೆ. ಪ್ರೊಫೆಸರ್ ನಂಜುಂಡರಾವ್ ರಾಷ್ಟ್ರೀಯ ಪುರಸ್ಕಾರ (ಒಂದು ಲಕ್ಷ ರೂ.ನಗದು ಮತ್ತು ಪ್ರಶಸ್ತಿ ಫಲಕ), ಆರ್ಯಮೂರ್ತಿಯವರ ನೆನಪಿಗಾಗಿ ಪ್ರಶಸ್ತಿ (50,000 ರೂ. ಮತ್ತು ಸ್ಮರಣ ಫಲಕ), ಕೇಜ್ರಿವಾಲ ನೆನಪಿನಲ್ಲಿ ಪ್ರಶಸ್ತಿ (50,000ರೂ. ಮತ್ತು ಸ್ಮರಣ ಫಲಕ), ದೇವರಾಜ ಅರಸುರವರ ಹೆಸರಿನಲ್ಲಿ ಪ್ರಶಸ್ತಿ (50,000 ರೂ. ಮತ್ತು ಸ್ಮರಣ ಫಲಕ).

ಈ ವರ್ಷ ಹೊಸದಾಗಿ ಸುಬ್ರಮಣ್ಯರಾಜು ಅವರ ಹೆಸರಿನಲ್ಲಿ ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ಪ್ರಶಸ್ತಿ (50,000ರೂ.ಮತ್ತು ಸ್ಮರಣ ಫಲಕ)
ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಜನರು ಬರುವ ನಿರೀಕ್ಷೆಯಿದ್ದು, ಚಿತ್ರಕಲಾ ಪರಿಷತ್ತಿನ ನಾಲ್ಕು ಕಲಾಗ್ಯಾಲರಿಯಲ್ಲಿ ಕಲಾ ಪ್ರದರ್ಶನ ದ ಜತೆಗೆ ಈ ವರ್ಷ ಬೆಂಗಳೂರಿನ ಲ್ಯಾಂಡ್‍ಸ್ಕೇಪ್ ಬಗ್ಗೆ ಸುರೇಶ್ ಜಯರಾಮ್‍ಅವರ ನೇತೃತ್ವದಲ್ಲಿ ಹಿಂದಿನ ಮತ್ತು ಇಂದಿನ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.

ಚಿತ್ರಸಂತೆ ಜ.5ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕುಮಾರ ಕೃಪಾ ರಸ್ತೆಯಲ್ಲಿ ನಡೆಯಲಿದ್ದು, ಉಚಿತ ಪ್ರವೇಶ. ಭಾನುವಾರ ತಾವು ಈ ಚಿತ್ರಸಂತೆಗೆ ಬಂದು ವಿಭಿನ್ನ ಚಿತ್ರಗಳನ್ನು ಕಣ್ಮುಂಬಿಕೊಳ್ಳುವ ಅವಕಾಶ ಒದಗಿದೆ.

Facebook Comments