ಬೆಂಕಿಹಚ್ಚಿ ಕರಡಿ ಓಡಿಸಿದ ಪ್ರಕರಣ ಕುರಿತು ಡಿಎಫ್‍ಒ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

bearಚಿತ್ರದುರ್ಗ, ನ.16- ಹೊಳಲ್ಕೆರೆ ತಾಲ್ಲೂಕಿನ ಹಿರೇಹಮ್ಮಿಗನೂರು ಗ್ರಾಮದಲ್ಲಿ ಗ್ರಾಮಸ್ಥರು ಓಡಿಸಿದ್ದ ಕರಡಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಸುರಕ್ಷಿತವಾಗಿ ಹಿಡಿದು ಕಾಡಿಗೆ ಕಳುಹಿಸುತ್ತೇವೆ ಎಂದು ಡಿಎಫ್‍ಒ ಮಂಜುನಾಥ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಹಾರ ಅರಸಿ ನಾಡಿಗೆ ಬಂದ ಜಾಂಬವಂತ ವಾಪಸಾಗುವಷ್ಟರಲ್ಲಿ ಕತ್ತಲಾದ್ದರಿಂದ ಮರವೇರಿತ್ತು. ಇದರಿಂದ ಜನರು ಮತ್ತು ಕರಡಿ ಇಬ್ಬರಲ್ಲೂ ಆತಂಕವಾಗಿತ್ತು.

ಜನ ಮರದ ಬುಡಕ್ಕೆ ಬೆಂಕಿ ಇಟ್ಟು ಕೊಂಬೆಯನ್ನು ಕತ್ತರಿಸಿದ್ದರಿಂದ ಬೆದರಿದ ಕರಡಿ ಓಡಿ ಹೋಗಿ ತಪ್ಪಿಸಿಕೊಂಡಿದೆ. ಕಡೂರು ಚಿಕ್ಕಜಾಜೂರು ಸುತ್ತಮುತ್ತ ಕರಡಿ ಹಾಗೂ ಎರಡು ಮರಿಗಳು ಅಡ್ಡಾಡುತ್ತಿವೆ. ಇವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಸಾಗಿಸುತ್ತೇವೆ. ಜನರು ಆತಂಕ ಪಡುವುದು ಬೇಡ ಎಂದು ಹೇಳಿದ್ದಾರೆ. ಕರಡಿ ಹಿಡಿದು ಸಂರಕ್ಷಿಸಿ ಕಾಡಿಗೆ ಕಳುಹಿಸುವ ಸಲುವಾಗಿ ಆರು ಜನರ ಒಂದು ತಂಡ ರಚಿಸಲಾಗಿದೆ. ಕರಡಿಗೆ ತೊಂದರೆಯಾಗದಂತೆ ಹಿಡಿಯಲಾಗುವುದು ಎಂದು ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

Facebook Comments