ಮಗನನ್ನು ಹೊತ್ತುಕೊಂಡು ಪ್ರತಿನಿತ್ಯ 4 ಕಿ.ಮೀ. ನಡೆಯುವ ಮಹಾತಾಯಿ..! ಕಾರಣವೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ನ.29-ವಿಶೇಷ ಚೇತನ ಮಗನ ಕನಸು ನನಸು ಮಾಡಲು ಪಣತೊಟ್ಟ ತಾಯಿಯೊಬ್ಬರು ಪ್ರತಿನಿತ್ಯ ನಾಲ್ಕು ಕಿಲೋಮೀಟರ್ ವರೆಗೆ ಮಗನನ್ನು ಹೊತ್ತುಕೊಂಡು ಶಾಲೆಗೆ ಕರೆದೊಯ್ಯುವ ಮಹತ್ಕಾರ್ಯದಲ್ಲಿ ನಿರತರಾಗಿದ್ದಾರೆ. ಹೌದು ಇದು ನಿಜ ಸಂಗತಿ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಕಡುದರ ಗ್ರಾಮದ ಜಯಲಕ್ಷ್ಮಿ ಎಂಬುವರು ಇಂತಹ ಘನ ಕೆಲಸ ಮಾಡುತ್ತಿದ್ದಾರೆ.

ಈಕೆ ಬಡವಿ. ಕೂಲಿ ಕೆಲಸ ಮಾಡುತ್ತಿದ್ದಾರೆ. ಮೂವರು ಮಕ್ಕಳಿದ್ದಾರೆ. ಅದರಲ್ಲಿ ಮೊದಲ ಮಗ ರಾಜೇಶ. ಈತ ವಿಕಲಚೇತನ ನಡೆಯಲು ಆಗುವುದಿಲ್ಲ. ಏಳನೆ ತರಗತಿವರೆಗೆ ತನ್ನ ಗ್ರಾಮದಲ್ಲೇ ಓದಿದ ರಾಜೇಶನಿಗೆ ಐಎಎಸ್ ಓದಬೇಕೆಂಬ ಮಹದಾಸೆ. ಹಾಗಾಗಿ ತಾಯಿ ಜಯಲಕ್ಷ್ಮಿ ಈತನ ಕನಸು ನನಸು ಮಾಡಲು ಪಣತೊಟ್ಟಿದ್ದಾರೆ.

ಕಡುದರ ಕುಗ್ರಾಮ. ಸಾರಿಗೆ ವ್ಯವಸ್ಥೆ ಇಲ್ಲ. ಆದ್ದರಿಂದ ನಾಲ್ಕು ಕಿಲೋಮೀಟರ್ ದೂಋದಲ್ಲಿರುವ ಮೀರಸಾಬಿ ಹಳ್ಳಿಯ ರಾಣಿಕೆರೆ ಹೈಸ್ಕೂಲ್‍ಗೆ ಜಯಲಕ್ಷ್ಮಿ ಮಗನನ್ನು ವಾತ್ಸಲ್ಯದಿಂದ ಹೊತ್ತುಕೊಂಡು ಬರುತ್ತಾರೆ. ರಾಜೇಶ ಈಗ 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಶಾಲೆ ಮುಗಿದ ನಂತರ ಈಕೆ ವಾಪಸ್ ಬಂದು ಮಗನನ್ನು ಹೆಗಲ ಮೇಲೆ ಹೊತ್ತು ಊರಿಗೆ ಕರೆತರುತ್ತಾರೆ.

ಸರ್ಕಾರ ರಾಜೇಶನಿಗೆ ತ್ರೈಸಿಕಲ್ ನೀಡಿದ್ದು, ಆದರೆ ಗುಣಮಟ್ಟವಿಲ್ಲದ ಇದು ಮುರಿದು ಮೂಲೆ ಸೇರಿದೆ. ಹಾಗಾಗಿ ತಾಯಿ ಹೆಗಲೇ ಈತನಿಗೆ ಆಸರೆ.ಸರ್ಕಾರ ರಾಜೇಶನಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಕೂಡ ಆಗ್ರಹಿಸಿದ್ದಾರೆ. ರಾಜೇಶನ ಕನಸು, ಜಯಲಕ್ಷ್ಮಿ ಅವರ ಪರಿಶ್ರಮ ಸಾರ್ಥಕವಾಗಲಿ.

Facebook Comments