ಕೋಟೆ ನಾಡಿಗೆ ದಕ್ಕುವುದೇ ಮತ್ತೊಂದು ಸಚಿವ ಸ್ಥಾನ..? ತೆರೆಮರೆಯಲ್ಲಿ ಲಾಬಿ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಡಿ.17- ಮುಂದಿನ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬೇಕು ಎಂಬ ಕೂಗು ಎದ್ದಿರುವ ಬೆನ್ನಲ್ಲೇ ಕೋಟೆ ನಾಡು ಚಿತ್ರದುರ್ಗ ದಲ್ಲಿ ಕ್ಯಾಬಿನೆಟ್ ಸೇರಲು ತೆರೆಮರೆಯ ಕಸರತ್ತು ತೀವ್ರಗೊಂಡಿದೆ. ಆರು ಬಾರಿ ಶಾಸಕರಾಗಿ ಆರಿಸಿ ಬಂದಿರುವ ರೆಡ್ಡಿ ಸಮುದಾಯದ ಜಿ.ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಕೂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನದಲ್ಲಿ ಜಯಭೇರಿ ಬಾರಿಸಿದ ನಂತರ ದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಕೆಲ ಕಾರ್ಯಕರ್ತರು ಭಾವಿ ಮಂತ್ರಿ ತಿಪ್ಪಾರೆಡ್ಡಿ ಎಂದು ಜೈಕಾರ ಹಾಕಿದ್ದರು. ಮಾತ್ರವಲ್ಲ ಕೆಲವರು ಪತ್ರಿಕಾಗೋಷ್ಠಿ ನಡೆಸಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದರು.

ತಿಪ್ಪಾರೆಡ್ಡಿ ಅವರು 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷದ ಸಂಘಟನೆಗೆ ಶ್ರಮಿಸಿದ್ದಾರೆ. ಜತೆಗೆ ರೆಡ್ಡಿ ಸಮುದಾಯದ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನ ನೀಡಿಲ್ಲ. ಹೀಗಾಗಿ ಈ ಬಾರಿ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಒತ್ತಡ ಹೆಚ್ಚಾಗಿದೆ.

ಬಿಜೆಪಿಯಲ್ಲಿ ಹೊರಗಿನವರಿಗೆ ಆದ್ಯತೆ ನೀಡಲಾಗುತ್ತಿದ್ದು , ಈ ಬಾರಿ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಮಾದಾರ ಚೆನ್ನಯ್ಯ ಗುರು ಪೀಠಾಧ್ಯಕ್ಷ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ತಿಪ್ಪಾರೆಡ್ಡಿ ಅವರು ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ದೆಹಲಿ ಮತ್ತು ಆರ್‍ಎಸ್‍ಎಸ್ ಅಂಗಳದಲ್ಲಿ ಲಾಬಿ ಆರಂಭಿಸಿದ್ದಾರೆ. ಇದರ ಮಧ್ಯೆ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಇಲ್ಲದಿರುವುದು ಹಾಗೂ ಗೊಲ್ಲ ಸಮುದಾಯಕ್ಕೆ ಪ್ರಾಧಾನ್ಯತೆ ನೀಡುವ ಹಿನ್ನೆಲೆಯಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾ ವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಾಗಿರುವ ಗೊಲ್ಲ ಸಮುದಾಯದವರು ಬಿಜೆಪಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ಪೂರ್ಣಿಮಾ ಅವರಿಗೆ ವರದಾನವಾಗಿ ಪರಿಣಮಿಸುವ ಸಾಧ್ಯತೆ ಇದೆ. ಪ್ರತಿ ಬಾರಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸು ತ್ತಿದ್ದ ಬೋವಿ ಸಮುದಾಯದ ಗೂಳಿಹಟ್ಟಿ ಶೇಖರ್ ಈ ಬಾರಿ ಯಾವುದೇ ಒತ್ತಡ ಹೇರದೆ ಮೌನಕ್ಕೆ ಶರಣಾಗಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಹೊಳಲ್ಕೆರೆ ಶಾಸಕ ಚಂದ್ರಪ್ಪ ಅವರು ಮುಖ್ಯಮಂತ್ರಿಗಳಿಗೆ ಆಪ್ತರಾಗಿರುವುದರಿಂದ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ಯಾವುದೇ ಹೇಳಿಕೆ ನೀಡುತ್ತಿಲ್ಲ. ಮೊದಲಿನಿಂದಲೂ ಬಿಎಸ್ ವೈ ಮಾತನ್ನು ಮೀರದಿರುವ ಚಂದ್ರಪ್ಪಗೆ ಮುಂದಿನ ದಿನಗಳಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುವುದು ಖಚಿತ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

ಮೊಳಕಾಲ್ಮೂರಿನಿಂದ ಗೆದ್ದಿರುವ ಶ್ರೀರಾಮುಲು ಅವರಿಗೆ ನಿರೀಕ್ಷೆಯಂತೆ ಡಿಸಿಎಂ ಸ್ಥಾನ ನೀಡದೆ ಕೇವಲ ಸಚಿವರನ್ನಾಗಿ ಮಾಡಲಾಗಿದೆ. ಇದರ ಜತೆಗೆ ಜಿಲ್ಲೆಯಿಂದ ಮತ್ತೊಬ್ಬರಿಗೆ ಸಂಪುಟದಲ್ಲಿ ಸ್ಥಾನ ನೀಡಿದರೆ ಗಾಯದ ಮೇಲೆ ಉಪ್ಪು ಸವರಿ ದಂತಾಗುತ್ತದೆ ಎಂಬುದನ್ನು ಅರಿತಿರುವ ವರಿಷ್ಠರು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಜಿಲ್ಲೆಯ ಯಾರಿ ಗೂ ಸಚಿವ ಸ್ಥಾನ ನೀಡುವ ಸಾಧ್ಯತೆ ಇಲ್ಲ.

Facebook Comments