ಧೀಮಂತ ನಾಯಕ ಅನಂತಕುಮಾರ್ ನಿಧನದಿಂದ ಅತೀವ ನೋವುಂಟಾಗಿದೆ

ಈ ಸುದ್ದಿಯನ್ನು ಶೇರ್ ಮಾಡಿ

GH Thippareddyಚಿತ್ರದುರ್ಗ, ನ.13- ಧೀಮಂತ ನಾಯಕ ಅನಂತಕುಮಾರ್ ನಿಧನದಿಂದ ಅತೀವ ನೋವುಂಟಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ನುಡಿದರು. ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅನಂತಕುಮಾರ್‍ರವರು ಬಿಜೆಪಿ. ಕಷ್ಟಕಾಲದಲ್ಲಿದ್ದಾಗ ನಿಸ್ವಾರ್ಥದಿಂದ ದುಡಿದರು. ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಬೆಂಗಳೂರಿನಿಂದ ಪಾರ್ಲಿಮೆಂಟ್‍ಗೆ ಆಯ್ಕೆಯಾದ ಅನಂತಕುಮಾರ್ ಸತತವಾಗಿ ಆರು ಬಾರಿ ಜಯಶಾಲಿಯಾಗಿ ಈಗಿನ ಪ್ರಧಾನಿ ನರೇಂದ್ರಮೋದಿರವರ ಸರ್ಕಾರದಲ್ಲಿ ರಸಗೊಬ್ಬರ ಮತ್ತು ರಾಸಾಯನಿಕ ಖಾತೆಯನ್ನು ಹೊಂದಿ ರೈತರಿಗೆ ಗೊಬ್ಬರದ ಅಭಾವವನ್ನು ನೀಗಿಸಿದ ಚತುರ ರಾಜಕಾರಣಿ ಎಂದು ಗುಣಗಾನ ಮಾಡಿದರು. ಬಡವರು ಹೃದಯಾಘಾತಕ್ಕೆ ತುತ್ತಾದಾಗ ಅತ್ಯಂತ ಕಡಿಮೆ ದರದಲ್ಲಿ ಸ್ಟಂಟ್ ಅಳವಡಿಸಿಕೊಳ್ಳುವ ಯೋಜನೆಯನ್ನು ಜಾರಿಗೆ ತಂದ ಮೇರು ವ್ಯಕ್ತಿತ್ವದ ನಾಯಕ ಅನಂತಕುಮಾರ್‍ರನ್ನು ಕಳೆದುಕೊಂಡು ಪಕ್ಷ ಈಗ ಬಡವಾಗಿದೆ ಎಂದು ನೊಂದು ನುಡಿದರು.

ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್ ಮಾತನಾಡಿ, 1982ರಿಂದಲೂ ಅನಂತಕುಮಾರ್‍ರವರ ಜೊತೆ ಒಡನಾಟವಿಟ್ಟುಕೊಂಡಿದ್ದೆ. ಎಂದು ಹಿಂದಿನ ಕೆಲವು ಘಟನೆಗಳನ್ನು ನೆನಪಿಸಿಕೊಂಡರು.ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿದ್ದೇಶ್‍ಯಾದವ್ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ಜಾತಿ ಸಮೀಕರಣ ನಡೆಸಿ ತಂತ್ರಗಾರಿಕೆಯನ್ನು ರೂಪಿಸುವಲ್ಲಿ ಅತಿ ನಿಪುಣರಾಗಿದ್ದ ಅನಂತಕುಮಾರ್‍ರವರು ಇಲ್ಲಿಯವರೆಗೂ ನಡೆದ ಎಲ್ಲಾ ಚುನಾವಣೆಯಲ್ಲಿಯೂ ಮುಂದಾಲೋಚನೆ ಇಟ್ಟುಕೊಂಡು ಕೆಲಸ ಮಾಡಿದ್ದರಿಂದ ಕೇಂದ್ರದಲ್ಲಿ ಬಿಜೆಪಿ.ಅಧಿಕಾರಕ್ಕೆ ಬರಲು ಕಾರಣವಾಯಿತು ಎಂದು ಹೇಳಿದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಲಕ್ಷಣಗಳು ಅನಂತಕುಮಾರ್‍ರವರಿಗಿದ್ದರೂ ರಾಜಕೀಯ ಮೇಲಾಟದಿಂದ ಅವರು ಸಿಎಂ ಆಗಲಿಲ್ಲ. ಕಾರ್ಯಕರ್ತರಿಗೆ ಸದಾ ಆತ್ಮಸ್ಥೈರ್ಯ ತುಂಬುವ ದೊಡ್ಡತನ ಅವರಲ್ಲಿತ್ತು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿ, ರತ್ನಮ್ಮ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ನಗರಾಧ್ಯಕ್ಷ ತಿಪ್ಪೇಸ್ವಾಮಿ, ವಕ್ತಾರ ನಾಗರಾಜ್ ಬೇದ್ರೆ, ಶಿವಣ್ಣಾಚಾರ್, ಗ್ರಾಮಾಂತರ ಅಧ್ಯಕ್ಷ ಸುರೇಶ್‍ಸಿದ್ದಾಪುರ, ರಂಗಸ್ವಾಮಿ, ಗೌಡ, ಚಂದ್ರಿಕ, ಲೋಕನಾಥ್, ನಗರಸಭಾ ಸದಸ್ಯ ಹರೀಶ್ ಇನ್ನು ಮುಂತಾದವರು ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Facebook Comments