ಸೀತಾಲಕ್ಷ್ಮಣರೊಂದಿಗೆ ಶ್ರೀರಾಮ ಭೇಟಿ ಕೊಟ್ಟ ಚುಂಚನಕಟ್ಟೆ

ಈ ಸುದ್ದಿಯನ್ನು ಶೇರ್ ಮಾಡಿ

chunchanakatte
ಮೈಸೂರು ನಗರದಿಂದ 57 ಕಿಲೋ ಮೀಟರ್ ದೂರದಲ್ಲಿರುವ ಚುಂಚನಕಟ್ಟೆ ಕ್ಷೇತ್ರವು ಆಸ್ತಿಕರ ಪಾಲಿನ ಪವಿತ್ರ ಕ್ಷೇತ್ರ. ಇಲ್ಲಿ ಕಾವೇರಿಯು 60 ಅಡಿ ಎತ್ತರದಿಂದ ಧುಮುಕುವ ಸುಂದರ ಜಲಪಾತವಿದೆ. ಈ ಕಾರಣದಿಂದ ಇದು ವಿಹಾರಿಗಳ ಪರಮಪ್ರಿಯ ತಾಣವಾಗಿದೆ. ಪ್ರಕೃತಿಯ ಮಡಿಲಿನಲ್ಲಿ ಪವಡಿಸಿರುವ ಈ ಸುಂದರ ಕ್ಷೇತ್ರಕ್ಕೆ ಅದರದೇ ಆದ ಐತಿಹ್ಯವಿದೆ.

ಮೈಸೂರು ನಗರದಿಂದ ಕೃಷ್ಣರಾಜನಗರ ಮಾರ್ಗವಾಗಿ 57 ಕಿಲೋಮೀಟರ್ ಸಾಗಿದರೆ ಚುಂಚನಕಟ್ಟೆ ಎಂಬ ಪುರಾಣ ಪ್ರಸಿದ್ಧ ಕ್ಷೇತ್ರ ಗೋಚರಿಸುತ್ತದೆ.
ಈ ಕ್ಷೇತ್ರದ ಅಧಿದೇವತೆಯಾದ ಶ್ರೀರಾಮನ ದೇವಾಲಯದ ರಾಜಗೋಪುರವು ದೂರದಿಂದಲೇ ಕೈಬೀಸಿ ಕರೆಯುತ್ತದೆ. ಆಲಯವನ್ನು ಸಮೀಪಿಸಿ ಮೆಟ್ಟಿಲೇರತೊಡಗಿದಾಗ ನರಪತಿ ಬಿರುದಂತೆಂಬರ ಗಂಡ ಮೈಸೂರು ಮಹಾರಾಜ ಶ್ರೀಕೃಷ್ಣರಾಜ ಒಡೆಯರ್ ಅವರ ಸೇವೆ ಎಂದು ದಪ್ಪ ಅಕ್ಷರಗಳಲ್ಲಿ ಬರೆದಿರುವುದು ಗೋಚರಿಸುತ್ತದೆ.

ಮಹಾದ್ವಾರವನ್ನು ದಾಟಿದೊಡನೆ ವಿಶಾಲವಾದ ಪ್ರಾಕಾರ. ಅದರ ಗೋಡೆಯ ಮೇಲೆ ಶ್ರೀಮನ್ನಾರಾಯಣನ ದಶಾವತಾರಗಳ ಸುಂದರ ಚಿತ್ರಣ. ವಿಮಾನಗೋಪುರದ ಕೆತ್ತನೆಯ ಶೈಲಿ ಗಮನ ಸೆಳೆಯುತ್ತದೆ. ಪ್ರದಕ್ಷಿಣೆ ಹಾಕಿ ಗರ್ಭಗುಡಿಗೆ ಪ್ರವೇಶಿಸುವಾಗ ಬಾಗಿಲಿನ ಎರಡು ಬದಿಗಳಲ್ಲಿರುವ ಗರುಡ ಮತ್ತು ಆಂಜನೇಯನ ಬೃಹತ್ ಮೂರ್ತಿಗಳನ್ನು ನೋಡಬಹುದು.

chunchanakatte-1

ಪೌರಾಣಿಕ ಹಿನ್ನೆಲೆ
ಚುಂಚನಕಟ್ಟೆ ಕ್ಷೇತ್ರಕ್ಕೆ ಪೌರಾಣಿಕ ಹಿನ್ನೆಲೆಯಿದೆ. ವನವಾಸದ ಕಾಲದಲ್ಲಿ ಸೀತಾಲಕ್ಷ್ಮಣರೊಂದಿಗೆ ಶ್ರೀರಾಮನು ಇಲ್ಲಿಗೆ ಭೇಟಿ ನೀಡಿದ್ದ. ಈ ಭಾಗದ ವನಸಿರಿಗೆ ಶ್ರೀರಾಮ ಮನಸೋತ. ಚುಂಚ ಮತ್ತು ಚುಂಚಿ ಎಂಬ ಆದಿವಾಸಿ ದಂಪತಿಯ ಕೋರಿಕೆಯ ಮೇಲೆ ಸೀತಾರಾಮಲಕ್ಷ್ಮಣರು ಇಲ್ಲಿ ಕೆಲ ದಿನ ತಂಗಿದ್ದರು. ಈ ಸುಂದರ ಪ್ರದೇಶದಲ್ಲಿ ನೀರಿನ ಕೊರತೆಯಿತ್ತು. ನಾನು ಸ್ನಾನ ಮಾಡಬೇಕು ಎಂದು ಸೀತಾಮಾತೆ ಹೇಳಿದಾಗ, ನೀರಿನ ವ್ಯವಸ್ಥೆ ಮಾಡುವಂತೆ ರಾಮನು ಲಕ್ಷ್ಮಣನಿಗೆ ಆಜ್ಞಾಪಿಸಿದ. ಆಗ ಲಕ್ಷ್ಮಣನು ಅಲ್ಲಿದ್ದ ಒಂದು ಬಂಡೆಗೆ ಬಾಣ ಪ್ರಯೋಗ ಮಾಡಿದ. ಅಲ್ಲಿಂದ ನೀರು ಉಕ್ಕಿ ಹರಿಯತೊಡಗಿತು. ಸೀತಾಮಾತೆಯು ಸಂತಸದಿಂದ ಅರಿಶಿನ, ಕುಂಕುಮ, ಸೀಗೆಪುಡಿ ಬಳಸಿ ಸ್ನಾನ ಮಾಡಿದಳು. ಈ ಜಲಪಾತದಲ್ಲಿ ಧುಮ್ಮಿಕ್ಕುವ ನೀರಿನ ಧಾರೆಗಳು ಈಗಲೂ ಅರಿಶಿನ, ಕುಂಕುಮದ ಬಣ್ಣದಿಂದ ಕೂಡಿವೆ.

ಐತಿಹ್ಯ 300-400 ಅಡಿ ಅಗಲ, 60 ಅಡಿ ಎತ್ತರದಿಂದ ಇಲ್ಲಿ ನೀರು ಧುಮುಕುತ್ತದೆ. ಇದರ ಭೋರ್ಗರೆತ ಬಹಳ ದೂರದವರೆಗೆ ಕೇಳಿಸುತ್ತದೆ. ಮಳೆಗಾಲದಲ್ಲಿ ಜಲಪಾತದ ರಭಸ ಜಾಸ್ತಿ. ಕೋದಂಡರಾಮನ ದೇವಾಲಯವು ಜಲಪಾತದ ಪಕ್ಕದಲ್ಲಿಯೇ ಇದೆ. ಪ್ರಾಕಾರದ ಗೋಡೆಗಳು ಜಲಪಾತದ ಶಬ್ದಕ್ಕೆ ಪ್ರತಿಧ್ವನಿಸುತ್ತವೆ. ಆದರೆ, ಗರ್ಭಗುಡಿಯ ಹೊಸ್ತಿಲು ದಾಟಿ ಒಳಗೆ ಪ್ರವೇಶಿಸಿದ ಕೂಡಲೇ ನಿಸ್ಯಬ್ದ. ಭೋರ್ಗರೆತದ ಮೊರೆತ ಸ್ವಲ್ಪವೂ ಕೇಳಿಸುವುದಿಲ್ಲ. ಇದಕ್ಕೊಂದು ಉಪಕಥೆ ಇದೆ. ಚುಂಚನಕಟ್ಟೆಯಲ್ಲಿ ವಾಸ್ತವ್ಯ ಹೂಡಿದ್ದಾಗ ಸೀತಾಮಾತೆಯು ಬಿಡುವಿಲ್ಲದ ಹಾಗೆ ಮಾತನಾಡುತ್ತಿದ್ದಳಂತೆ. ಕುಪಿತನಾದ ಶ್ರೀರಾಮನು ಹೆಣ್ಣುಮಕ್ಕಳು ಇಷ್ಟೊಂದು ಮಾತನಾಡಬಾರದು ಎಂದು ನುಡಿದ. ಸೀತೆಯ ಮಾತು ಕಡಿಮೆ ಆಯಿತು. ಕಾವೇರಿಯೂ ಹೆಣ್ಣು. ಹಾಗಾಗಿ ಅವಳ ಭೋರ್ಗರೆತವು ಗರ್ಭಗುಡಿಯೊಳಗೆ ಕೇಳಿಸುವುದಿಲ್ಲ ಅನ್ನುತ್ತಾರೆ.

chunchanakatte-2

ಈ ಪ್ರದೇಶದಲ್ಲಿ ಶ್ರೀರಾಮನಿಗೆ ಅಜ್ಞಾತ ಋಷಿಯೊಬ್ಬರ ಭೇಟಿ ಆಯಿತು. ಆತ ಶ್ರೀಮನ್ನಾರಾಯಣನ ಪರಮಭಕ್ತ. ಆ ಋಷಿಯ ಭಕ್ತಿಗೆ ಮೆಚ್ಚಿದ ಶ್ರೀರಾಮ, ನಿನಗೆ ಬೇಕಾದ ವರ ಕೇಳು, ಕೊಡುತ್ತೇನೆ ಎಂದು ಅನುಗ್ರಹಿಸಿದ. ಸೀತಾಮಾತೆಯು ನಿನ್ನ ಬಲಭಾಗದಲ್ಲಿ ನಿಂತಿರುವುದನ್ನು ನೋಡ ಬೇಕು ಅದೇ ನನ್ನ ಕೋರಿಕೆ ಎಂದು ಆ ಋಷಿ ಹೇಳಿದರು. ರಾಮನು ಆತನ ಬೇಡಿಕೆ ಈಡೇರಿಸಿದ. ಚುಂಚನಕಟ್ಟೆಯ ದೇವಾಲಯದಲ್ಲಿ ಶ್ರೀ ರಾಮನ ಬಲಭಾಗದಲ್ಲಿ ಸೀತೆಯ ವಿಗ್ರಹ
ವಿದ್ದು , ಎಡಭಾಗದಲ್ಲಿ ಲಕ್ಷ್ಮಣನ ಮೂರ್ತಿ ಇದೆ. ಸಾಮಾನ್ಯವಾಗಿ ಇತರ ಎಲ್ಲ ದೇಗುಲಗಳಲ್ಲಿ ಇರುವಂತೆ ಇಲ್ಲಿ ರಾಮಭಕ್ತ ಆಂಜನೇಯನ ಮೂರ್ತಿ ಇಲ್ಲ. ಇದಕ್ಕೂ ಐತಿಹ್ಯವಿದೆ. ದೇವಾಲಯಕ್ಕೆ ಸಾಗುವ ದಾರಿಯಲ್ಲಿ ಮತ್ತು ಕಾವೇರಿ ನದಿಯ ಹತ್ತಿರ ಆಂಜನೇಯನ ಎರಡು ದೇಗುಲಗಳಿವೆ.

ಮೈಸೂರು ಮಹಾರಾಜರ ನೆರವಿನಿಂದ ಈ ದೇವಾಲಯ ನಿರ್ಮಾಣವಾಗಿದ್ದು ಈಗ ನವೀಕರಣಗೊಂಡಿದೆ. ಪ್ರಾಕಾರವನ್ನು ಸ್ವಚ್ಛವಾಗಿ ಇರಿಸಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನವು ಇಲ್ಲಿ ಸಮುದಾಯ ಭವನವನ್ನು ನಿರ್ಮಿಸಿದೆ. ಇದರ ಜತೆ ಮತ್ತೊಂದು ವಿಶಾಲವಾದ ಭವನವಿದೆ. ಇಲ್ಲಿ ಶುಭಕಾರ್ಯಗಳು ನಡೆಯುತ್ತಿರುತ್ತವೆ. ಕೋದಂಡರಾಮನ ದರ್ಶನ ಮಾಡಲು ಪ್ರತಿದಿನ ಭಕ್ತರು ಆಗಮಿಸುತ್ತಾರೆ. ಜಲಪಾತವು ಮತ್ತೊಂದು ಆಕರ್ಷಣೆ. ಜಲಪಾತದ ಎರಡು ಧಾರೆಗಳು ಭೂಮಿಯನ್ನು ಸ್ಪರ್ಶಿಸಿ ಒಟ್ಟಾಗಿ ಹರಿದು ಕೃಷ್ಣರಾಜಸಾಗರ ಜಲಾಶಯವನ್ನು ಸೇರುತ್ತದೆ. ಜಲಪಾತದ ಪಕ್ಕದಲ್ಲಿ ವಿದ್ಯುತ್ ಉತ್ಪಾದನಾ ಘಟಕವಿದೆ. ಇಲ್ಲಿ 18 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಚುಂಚನಕಟ್ಟೆಯಲ್ಲಿ ಸಕ್ಕರೆ ಕಾರ್ಖಾನೆಯೂ ಇದೆ.

ಪ್ರತಿ ವರ್ಷ ಸಂಕ್ರಾಂತಿಯಂದು ಶ್ರೀರಾಮನ ಬ್ರಹ್ಮ ರಥೋತ್ಸವವು ಅದ್ಧೂರಿಯಿಂದ ನೆರವೇರುತ್ತದೆ. ಐದಾರು ದಿನ ಪೂಜಾಕೈಂಕರ್ಯಗಳು, ವಿವಿಧ ಉತ್ಸವಗಳು ನಡೆಯುತ್ತವೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಇದನ್ನು ಕಣ್ತುಂಬಿಕೊಳ್ಳುತ್ತಾರೆ. ಇದೇ ದಿನಗಳಲ್ಲಿ ಇಲ್ಲಿ ಬೃಹತ್ ಪ್ರಮಾಣದ ದನಗಳ ಜಾತ್ರೆ ನೆರವೇರುತ್ತದೆ. ಕಿಲೋಮೀಟರ್ ಗಟ್ಟಲೆ ವ್ಯಾಪಿಸುವ ಈ ಜಾತ್ರೆಯಲ್ಲಿ ರಾಸುಗಳನ್ನು ಮಾರುವವರು ಹಾಗೂ ಖರೀದಿಸುವವರು ದೊಡ್ಡ ಸಂಖ್ಯೆಯಲ್ಲಿ ನೆರೆಯುತ್ತಾರೆ.

ಭಕ್ತಿಯ ಕ್ಷೇತ್ರವಾಗಿರುವ ಚುಂಚನಕಟ್ಟೆಯು ಈಗ ಪಿಕ್ನಿಕ್ ತಾಣವಾಗಿದೆ. ವಾರಾಂತ್ಯದಲ್ಲಿ ವಿಹಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಂಥಹ ಸುಪ್ರಸಿದ್ಧ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ. ಶೌಚಾಲಯ, ಕುಡಿಯುವ ನೀರು, ಉಪಹಾರಗೃಹ ಮುಂತಾದ ಕನಿಷ್ಠ ಸೌಲಭ್ಯವೂ ಇಲ್ಲ. ದೇವಾಲಯದೊಳಗಿನ ಆವರಣವು ಸ್ವಚ್ಛವಾಗಿದ್ದರೂ ಕೂಡ ನದೀ ದಡದಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಗೋಚರಿಸುತ್ತದೆ. ಪ್ರವಾಸಿಗರು ತಾವು ತಿಂದುಂಡು ಮಿಕ್ಕ ಪದಾರ್ಥಗಳನ್ನು ಮನಸೋಇಚ್ಛೆ ಚೆಲ್ಲಿ ಹೋಗುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಇಂತಹ ಐತಿಹಾಸಿಕ ಹಾಗೂ ಸುಂದರವಾದ ತಾಣಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.

Facebook Comments

Sri Raghav

Admin