ಕನ್ನಡ ಸಿನಿಮಾಗಳ ಪೈರಸಿ ತಡೆಯಲು ಕಾನೂನು ಕ್ರಮ : ಗೃಹಸಚಿವರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.19- ಕನ್ನಡ ಚಿತ್ರರಂಗಕ್ಕೆ ಕಾಡುತ್ತಿರುವ ಪೈರಸಿ ಸಮಸ್ಯೆ ಹಾಗೂ ಚಿತ್ರೀಕರಣ , ಚಿತ್ರ ಬಿಡುಗಡೆಯ ವೇಳೆ ನಡೆಯುತ್ತಿರುವ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವು ದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಭರವಸೆ ನೀಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಚಿತ್ರರಂಗದ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೆರೆಯ ಹಿಂದಿನ ಸಮಸ್ಯೆಗಳನ್ನು ನಾನೀಗ ಅರ್ಥ ಮಾಡಿಕೊಂಡಿದ್ದೇನೆ. ಚಿತ್ರೀಕರಣ ವೇಳೆ ಎಷ್ಟು ಒತ್ತಡದಲ್ಲಿ ಕೆಲಸ-ಕಾರ್ಯಗಳನ್ನು ನಡೆಸಬೇಕಾಗುತ್ತದೆ ಎಂಬುದು ಗೊತ್ತಿದೆ. ಇದೆಲ್ಲದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಕೋಟ್ಯಂತರ ರೂ. ಬಂಡವಾಳ ಹೂಡಿ ಜನರನ್ನು ರಂಜಿಸುವ ನಿಟ್ಟಿನಲ್ಲಿ ಚಲನಚಿತ್ರಗಳನ್ನು ತಯಾರಿಸಲಾಗುತ್ತದೆ. ಆದರೆ ಕೆಲವರು ಅದನ್ನು ನಕಲಿ ಮಾಡಿ (ಪೈರಸಿ) ನಿರ್ಮಾಪಕರಿಗೆ ನಷ್ಟ ಉಂಟು ಮಾಡುತ್ತಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.

ಬ್ಯಾಂಕ್ ವಂಚನೆ ಸೇರಿದಂತೆ ವಿವಿಧ ರೀತಿಯ ವಂಚನೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೈಬರ್ ಅಪರಾಧ ನಿಗ್ರಹ ಘಟಕವನ್ನು ಆಧುನೀಕರಣಗೊಳಿಸಿ ಸುಸಜ್ಜಿತ ಆಧುನಿಕ ವ್ಯವಸ್ಥೆಗಳೊಂದಿಗೆ ಸೂಕ್ತ ಅಧಿಕಾರಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.

ಇದೇ ವೇಳೆ ಸಚಿವರು ಪ್ರತ್ಯೇಕವಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷರ ಜತೆ ಪೊಲೀಸ್ ಮಹಾ ನಿರ್ದೇಶಕರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಚಿತ್ರೀಕರಣ ಸಂದರ್ಭದಲ್ಲಿ ಅನುಮತಿ ನೀಡುವಾಗ ತೊಂದರೆ ಕೊಡಬೇಡಿ ಎಂದು ಸೂಚನೆ ಕೂಡ ನೀಡಿದರು.

ಪೈರಸಿ ಹಾವಳಿಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಇದಕ್ಕೆ ಪ್ರತ್ಯೇಕ ಕಾನೂನು ಮಾಡಲು ಪ್ರಯತ್ನಿಸುತ್ತೇನೆ ಎಂದರು.
ಇದಕ್ಕೂ ಮೊದಲು ಸಿನಿಮಾಗಳ ಮೇಲೆ ಪೈರಸಿ ಪ್ರಭಾವ ಜಾಸ್ತಿ ಆಗುತ್ತಿದೆ. ಇದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಗೃಹ ಮಂತ್ರಿಗಳಿಗೆ ಮನವಿ ಮಾಡಲಾಯಿತು.

ದೊಡ್ಡ ಸಿನಿಮಾಗಳು ಪೈರಸಿ ಆಗುತ್ತಿರುವುದರಿಂದ ನಿರ್ಮಾಪಕರಿಗೆ ಕೋಟಿ ಕೋಟಿ ನಷ್ಟವಾಗುತ್ತದೆ. ಇದಕ್ಕೆ ಪ್ರತ್ಯೇಕ ಕಾನೂನು ತರಬೇಕು. ಹಾಗೂ ಮಲ್ಟಿಫ್ಲೆಕ್ಸ್‍ಗಳಲ್ಲಿ ಟಿಕೆಟಿನ ಬೆಲೆ 200 ರೂ.ಗಳಿಗೆ ನಿಗದಿಪಡಿಸಬೇಕು. ಕೊರೊನಾ ಸಂದರ್ಭದಲ್ಲಿ ಥಿಯೇಟರುಗಳಿಗೆ ತೊಂದರೆಯಾಗಿದ್ದು ಮತ್ತೆ ಸರ್ಟಿಫಿಕೇಟ್ ರಿನಿವಲ್‍ಗೆ ಅನುವು ಮಾಡಿಕೊಡಬೇಕು.

ಅಷ್ಟೇ ಅಲ್ಲದೆ ಚಿತ್ರೀಕರಣದಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ತುಂಬಾ ತೊಂದರೆ ಕೊಡುತ್ತಿದ್ದು, ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇವುಗಳಿಗೆ ಕಡಿವಾಣ ಹಾಕಬೇಕು ಎಂದು ವಾಣಿಜ್ಯ ಮಂಡಳಿಯ ಅಧ್ಯಕ್ಷರು, ಪದಾಕಾರಿಗಳು ಒಕ್ಕೊರಲಿನಿಂದ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಛಾಯಾಗ್ರಾಹಕರ ಸಂಘ , ನಿರ್ಮಾಪಕರ ಸಂಘ ಸೇರಿದಂತೆ ಕರ್ನಾಟಕ ವಾಣಿಜ್ಯ ಮಂಡಳಿ ಸಚಿವರನ್ನು ಸನ್ಮಾನಿಸಲಾಯಿತು.
ವಾಣಿಜ್ಯ ಮಂಡಳಿಯ ಅಧ್ಯಕ್ಷ ಜಯರಾಜ್, ನಿರ್ಮಾಪಕ ಗಣೇಶ್, ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎಂ.ಎನ್.ಸುರೇಶ್, ನಿರ್ಮಾಪಕ ಉಮೇಶ್ ಬಣಕಾರ್‍ಮುಂತಾದವರು ಉಪಸ್ಥಿತರಿದ್ದರು.

Facebook Comments