7 ತಿಂಗಳ ನಂತರ ಥಿಯೇಟರ್ ಓಪನ್, ಶಿವಾರ್ಜುನ ಚಿತ್ರ ವೀಕ್ಷಸಿದ ಚಿರು ಕುಟುಂಬ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ. 16- ಸುಮಾರು 7 ತಿಂಗಳಿನಿಂದ ಕಳೆಗುಂದಿದ್ದ ಚಿತ್ರಮಂದಿರಗಳಲ್ಲಿ ಈಗ ಹೊಸ ಬೆಳಕು ಮೂಡಿದೆ. ಕೊರೊನಾದಿಂದ ಕಂಗೆಟ್ಟಿದ್ದ ಸಿನಿಪ್ರಿಯರು ಕೂಡ ಚಿತ್ರಮಂದಿರದತ್ತ ಮುಖ ಮಾಡಿರುವುದರಿಂದ ನಿರ್ಮಾಪಕರು ಹಾಗೂ ನಿರ್ದೇಶಕರ ಮೊಗದಲ್ಲಿ ಮಂದಸ್ಮಿತ ಮೂಡಿದೆ.

ಕೇಂದ್ರ ಸರ್ಕಾರ ಚಿತ್ರಮಂದಿರ ತೆರೆಯಲು ಅನುಮತಿ ನೀಡಿದ್ದರೂ ಕೂಡ ಪ್ರೇಕ್ಷಕರು ಕೊರೊನಾ ಭಯದಿಂದ ಚಿತ್ರಮಂದಿರಕ್ಕೆ ಬರುತ್ತಾರೋ? ಇಲ್ಲವೋ? ಎಂಬ ಅಳುಕಿನಲ್ಲಿದ್ದ ನಿರ್ಮಾಪಕರು ಹೊಸ ಚಿತ್ರಗಳನ್ನು ಬಿಡುಗಡೆ ಮಾಡಲು ಮುಂದಾಗದಿರುವುದಿಲ್ಲ ಶಿವಾರ್ಜುನ, ಕಾಣದಂತೆ ಮಾಯವಾದರು, ಥರ್ಡ್‍ಕ್ಲಾಸ್‍ನಂತಹ ಕೆಲವು ಚಿತ್ರಗಳನ್ನೇ ಮರುಬಿಡುಗಡೆ ಆದರೂ ಪ್ರೇಕ್ಷಕರು ಉತ್ಸಾಹದಿಂದ ಚಿತ್ರಮಂದಿರದತ್ತ ಹೆಜ್ಜೆ ಹಾಕಿದರು.

# ಉತ್ತಮ ರೆಸ್ಪಾನ್ಸ್:
ರಾಜ್ಯಾದಾದ್ಯಂತ ಇಂದಿನಿಂದ ಆರಂಭಗೊಂಡಿರುವ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬಂದು ತಮ್ಮ ನೆಚ್ಚಿನ ನಟನ ಚಿತ್ರಗಳನ್ನು ನೋಡುವ ಮೂಲಕ ಉತ್ತಮ ರೆಸ್ಪಾನ್ಸ್ ನೀಡಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಸ್ಟಾರ್ ನಟರುಗಳ ಚಿತ್ರಗಳು ಬಿಡುಗಡೆ ಆಗುವ ಮೂಲಕ ಚಿತ್ರಮಂದಿರ ಮತ್ತೆ ಟ್ರ್ಯಾಕ್ ಬರುವ ನಿರೀಕ್ಷೆ ಮೂಡಿಸಿದೆ.

# ಸಂತೋಷ್‍ನಲ್ಲಿ ಚಿತ್ರ ವೀಕ್ಷಿಸಿದ ಚಿರು ಕುಟುಂಬ:
ಸ್ಯಾಂಡಲ್‍ವುಡ್‍ನ ಯುವ ಸಾಮ್ರಾಟ್ ಚಿರಂಜೀವಿಸರ್ಜಾ ಅಭಿನಯದ ಶಿವಾರ್ಜುನ ಚಿತ್ರವು ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿರುವುದರಿಂದ ಚಿತ್ರಮಂದಿರವನ್ನು ತಳಿರುತೋರಣದಿಂದ ಸಿಂಗರಿಸಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದರು.

ನಾಳೆ ಚಿರಂಜೀವಿ ಸರ್ಜಾರ ಹುಟ್ಟುಹಬ್ಬವಿರುವುದರಿಂದ ಈ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು ಚಿರುವಿನ ತಾಯಿ, ಕುಟುಂಬದವರು ಹಾಗೂ ಅಭಿಮಾನಿಗಳು ಸಿನಿಮಾ ನೋಡಿ ಚಿರು ನೆನಪು ಮಾಡಿಕೊಂಡರು.

# ಪ್ರಸನ್ನದಲ್ಲಿ ಹೋಮಹವನ:
ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲೂ ಇಂದಿನಿಂದ ಚಿತ್ರ ಪ್ರದರ್ಶನ ಶುರುವಾಗಿದ್ದು, ಬೆಳಗಿನ ಪ್ರದರ್ಶನಕ್ಕೂ ಮುನ್ನ ಚಿತ್ರಮಂದಿರದಲ್ಲಿ ಹೋಮ ಹವನಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರ ಸೂಚಿರುವ ಮಾರ್ಗಸೂಚಿಯಂತೆ ಅಂತರವನ್ನು ಕಾಪಾಡಿಕೊಳ್ಳಲು ಒಂದು ಸೀಟು ಬಿಟ್ಟು ಇನ್ನೊಂದು ಸೀಟಿಗೆ ಟೇಪ್ ಹಾಕುವ ಮೂಲಕ ಅಂತರವನ್ನು ಕಾಪಾಡಿಕೊಂಡೇ ಚಿತ್ರ ಪ್ರದರ್ಶನ ಮಾಡಿದರು.

ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ಕಡ್ಡಾಯವಾಗಿ ಟೆಂಪರ್ ಚೆಕ್ ಮಾಡುವುದರೊಂದಿಗೆ ಸ್ಯಾನಿಟೈಸರ್ ಮಾಡಲಾಯಿತು. ಅಲ್ಲದೆ ಇಡೀ ಚಿತ್ರಮಂದಿರವನ್ನು ಸ್ಯಾನಿಟೈಸರ್ ಮಾಡುವ ಮೂಲಕ ಚಿತ್ರಮಂದಿರವನ್ನು ಪುನಾರಂಭಿಸಲಾಯಿತು.

# ಗೊಂದಲ:
ಕೊರೊನಾ ನಡುವೆಯೂ ಚಿತ್ರಬಿಡುಗಡೆಯಾಗುತ್ತಿರುವುದರಿಂದ ಪ್ರೇಕ್ಷಕರನ್ನು ಸೆಳೆಯಲು ಟಿಕೆಟ್ ದರ ಇಳಿಸುವುದಾಗಿ ಘೋಷಿಸಿದರೂ ಕೆಲವೆಡೆ ಎಂದಿನ ದರವನ್ನೇ ನಿಗದಿಪಡಿಸಿದ್ದುದು ಗೊಂದಲ ಮೂಡಿಸಿತ್ತಾದರೂ ಟಿಕೆಟ್ ಸಿಕ್ಕ ಪ್ರೇಕ್ಷಕರು ಸಂತಸದಿಂದಲೇ ಚಿತ್ರವನ್ನು ವೀಕ್ಷಿಸಿ ಆನಂದಿಸಿದರು.

ಒಟ್ಟಾರೆ ಇಂದಿನಿಂದ ಆರಂಭಗೊಂಡಿರುವ ಚಿತ್ರಪ್ರದರ್ಶನಕ್ಕೆ ರಾಜ್ಯಾದಾದ್ಯಂತ ಉತ್ತಮ ಪ್ರತಿಕ್ರಿಯೆಗಳು ಸಿಕ್ಕಿದ್ದು ಅಭಿಮಾನಿಗಳು ತಮ್ಮ ಮೆಚ್ಚಿನ ನಟರುಗಳ ಚಿತ್ರಗಳನ್ನು ನೋಡಿ ಆನಂದಿಸಿದರು.

Facebook Comments

Sri Raghav

Admin