ಚಿತ್ರಮಂದಿರಗಳ ಆರಂಭಕ್ಕೆ ಅನುಮತಿ ನೀಡುವಂತೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.30- ಚಿತ್ರಮಂದಿರಗಳನ್ನು ಆರಂಭಿಸುವ ಬಗ್ಗೆ ಸರ್ಕಾರ ಪುನರ್ ಪರಿಶೀಲನೆ ಮಾಡುವ ಮೂಲಕ ಚಿತ್ರಗಳ ಬಿಡುಗಡೆಗೂ ಅವಕಾಶ ಮಾಡಿಕೊಡುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಪ್ರಕಟಿಸಿರುವ ಅನ್‍ಲಾಕ್ 4.0 ಮಾರ್ಗಸೂಚಿಯಲ್ಲಿ ಚಿತ್ರಮಂದಿರಗಳಿಗೆ ಅವಕಾಶ ಕಲ್ಪಿಸಿಲ್ಲ. ಆದರೆ ಚಿತ್ರೋದ್ಯಮವನ್ನೇ ನಂಬಿಕೊಂಡು ಸಾಕಷ್ಟು ಮಂದಿ ಜೀವನ ನಡೆಸುತ್ತಿದ್ದೇವೆ. 700 ಸಿಂಗಲ್ ಸ್ಕ್ರೀನ್‍ಗಳ ಚಿತ್ರಮಂದಿರಗಳಿವೆ.

ಇದನ್ನು ಅವಲಂಬಿಸಿರುವ ಸಿಬ್ಬಂದಿಗಳಿದ್ದಾರೆ. ಎಲ್ಲರೂ ಸಂಕಷ್ಟದಲ್ಲಿದ್ದೇವೆ. ಸಾಲ ಮಾಡಿ ಬದುಕಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಥಿಯೇಟರ್‍ಗಳ ಮಾಲೀಕರು ತಮ್ಮ ಸಿಬ್ಬಂದಿಯನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿದ್ದಾರೆ. ಕಷ್ಟ ಅರ್ಥ ಮಾಡಿಕೊಂಡು ಚಿತ್ರಮಂದಿರಗಳ ತೆರವಿಗೂ ಶೀಘ್ರವೇ ಅನುವು ಮಾಡಿಕೊಡಬೇಕು.

ಚಿತ್ರಮಂದಿರಕ್ಕೆ ಬರುವುದು ಬಿಡುವುದು ಜನರಿಗೆ ಬಿಟ್ಟಿದ್ದು. ಆದರೆ, ದುಡ್ಡು ಹಾಕಿ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ ಎಂದು ತಿಳಿಸಿದ್ದಾರೆ.

ಚಿತ್ರಮಂದಿರದಲ್ಲಿ ಚಿತ್ರಗಳು ಆರಂಭವಾಗದಿದ್ದರೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ವಿಷ ಕುಡಿದು ಸಾಯುವ ಪರಿಸ್ಥಿತಿ ಬರುತ್ತದೆ ಎಂದು ನಿರ್ಮಾಪಕರೊಬ್ಬರು ಹೇಳಿಕೊಂಡಿದ್ದಾರೆ. ಇಂತಹ ಸ್ಥಿತಿ ಬರದಂತೆ ಎಚ್ಚರ ವಹಿಸಬೇಕು.

ಕೋಟಿ ಕೋಟಿ ಹಣ ಸುರಿದಿರುವ ನಿರ್ಮಾಪಕರಿಗೆ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿತ್ರೋದ್ಯಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಚಿತ್ರಮಂದಿರಗಳು ಹಾಗೂ ಇತರೆ ಚಟುವಟಿಕೆಗಳ ಆರಂಭಕ್ಕೂ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಆರು ತಿಂಗಳಿನಿಂದ ಚಿತ್ರೋದ್ಯಮ ಸಂಪೂರ್ಣ ಸ್ಥಗಿತವಾಗಿದೆ. ನಿರ್ಮಾಪಕರು, ವಿತರಕರು, ಪ್ರದರ್ಶಕರು ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದು ಅಥವಾ ನಾಳೆ ಆರಂಭವಾಗುತ್ತದೆ ಎಂಬ ಭರವಸೆಯಲ್ಲೇ ದಿನಗಳನ್ನು ಕಳೆದಿದ್ದೇವೆ.

ಇದೀಗ ಕೇವಲ ಸಿನಿಮಾ ಚಿತ್ರೀಕರಣಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ಚಿತ್ರಮಂದಿರಗಳನ್ನು ತೆರೆದರಷ್ಟೇ ನಮ್ಮ ಸಮಸ್ಯೆ ಬಗೆಹರಿಯಲಿದೆ.  ಕಾರಣ, ಈಗಾಗಲೇ ಬಿಡುಗಡಯೆಆಗಬೇಕಿರುವ ಸಾಲು ಸಾಲು ಚಿತ್ರಗಳು ಹಾಗೆಯೇ ಉಳಿದಿವೆ.

ಹೊಸ ಚಿತ್ರಗಳು ಚಿತ್ರೀಕರಣಗೊಂಡರೂ ಅದರ ಬಿಡುಗಡೆಗೂ ತೊಂದರೆ ಎದುರಾಗುತ್ತದೆ. ಹಾಗಾಗಿ ಮೊದಲು ಚಿತ್ರಮಂದಿರಗಳು ತೆರೆಯಬೇಕಿದೆ. ವರ್ಷಕ್ಕೆ ಸರಿಸುಮಾರು 250ಕ್ಕೂ ಹೆಚ್ಚು ಚಿತ್ರಗಳು ನಿರ್ಮಾಣವಾಗುತ್ತವೆ ಎಂದು ಮಾಹಿತಿ ನೀಡಿದರು.

ಆರು ತಿಂಗಳಿನಿಂದ ಪ್ರದರ್ಶನಗೊಳ್ಳದೆ ಹಲವಾರು ಚಿತ್ರಗಳು ಹಾಗೆಯೇ ಇವೆ. ನಾವು ಸಹ ಸರ್ಕಾರದ ಎಲ್ಲ ನಿಯಮಗಳನ್ನೂ ಪಾಲಿಸಿಯೇ ಚಿತ್ರಮಂದಿರಗಳನ್ನು ಆರಂಭಿಸಲು ಸಿದ್ಧರಿದ್ದೇವೆ.

ಸದ್ಯದಲ್ಲೇ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಈ ಕುರಿತು ಮನವಿ ಮಾಡಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಗಮನ ಹರಿಸಬೇಕಿದೆ ಎಂದು ತಿಳಿಸಿದರು.

Facebook Comments

Sri Raghav

Admin