ಅಸ್ಸಾಂ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹತಿ, ಡಿ.15- ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಸ್ಸಾಂ ರಾಜಧಾನಿ ಗುವಾಹತಿ ಸೇರಿದಂತೆ ವಿವಿಧೆಡೆ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆ ಮತ್ತು ಆನಂತರದ ಪೊಲೀಸ್ ಗೋಲಿಬಾರ್‍ನಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೇರಿದೆ.

ವಿಧೇಯಕ ಖಂಡಿಸಿ ಹಿಂಸಾತ್ಮಕ ಪ್ರತಿಭಟಿಸುತ್ತಿದ್ದ ಉದ್ರಿಕ್ತ ಗುಂಪಿನ ಮೇಲೆ ಡಿ.12ರಂದು ಪೊಲೀಸರು ನಡೆಸಿದ ಗೋಲಿಬಾರ್‍ನಲ್ಲಿ ಮೂವರು ಮೃತಪಟ್ಟಿದ್ದರು. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಇನ್ನೂ ಮೂವರು ಮೃತಪಟ್ಟಿದ್ದು, ಸತ್ತವರ ಸಂಖ್ಯೆ ಆರಕ್ಕೇರಿದೆ. ಗಾಯಾಳುಗಳಲ್ಲಿ ಇನ್ನೂ ಮೂವರ ಸ್ಥಿತಿ ಶೋಚನೀಯವಾಗಿದೆ.

ಅಸ್ಸಾಂ, ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ವಿಧೇಯಕ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿದೆ.
ಭಾರೀ ಭದ್ರತೆ ನಡುವೆಯೂ ಅಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದ್ದು, ಯಾವುದೇ ಸಂದರ್ಭದಲ್ಲೂ ಆಕ್ರೋಶ ಸ್ಫೋಟಗೊಳ್ಳುವ ಸಾಧ್ಯತೆ ಇದ್ದು, ಕಟ್ಟೆಚ್ಚರ ವಹಿಸಲಾಗಿದೆ.

ಬಂಗಾಳದಲ್ಲೂ ಸಾವು-ನೋವು:
ವಿಧೇಯಕ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಪಶ್ಚಿಮ ಬಂಗಾಳಕ್ಕೂ ಹಬ್ಬಿ ಹಿಂಸಾಚಾರದಿಂದ ಸಾವು-ನೋವು ಸಂಭವಿಸಿವೆ. ಕೋಲ್ಕತ್ತಾ, ಮುಷಿರಾಬಾದ್, 24 ಪರಗಣ ಜಿಲ್ಲೆ, ಗ್ರಾಮೀಣ ಹೌರಾ ಸೇರಿದಂತೆ ವಿವಿಧೆಡೆ ಭುಗಿಲೆದ್ದ ಹಿಂಸಾಚಾರದಲ್ಲಿ ಓರ್ವ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.

ಉದ್ರಿಕ್ತ ಪ್ರತಿಭಟನಾಕಾರರ ಆಕ್ರೋಶಕ್ಕೆ 25 ಬಸ್‍ಗಳು, ಐದು ರೈಲುಗಳು ಮತ್ತು ಕೆಲವು ಟ್ರಕ್‍ಗಳು ಬೆಂಕಿಗೆ ಆಹುತಿಯಾಗಿವೆ. ರೈಲ್ವೆ ಮತ್ತು ಬಸ್ ನಿಲ್ದಾಣಗಳ ಮೇಲೆ ದಾಳಿ ನಡೆಸಿದ ಗುಂಪು ಅಗ್ನಿ ಸ್ಪರ್ಶ ಮಾಡಿ ದಾಂದಲೆ ನಡೆಸಿದೆ. ಈ ಹಿಂಸಾಚಾರ ನಿಯಂತ್ರಿಸಲು ಪೊಲೀಸರ ಬಲಪ್ರಯೋಗದಲ್ಲಿ ಓರ್ವ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.

Facebook Comments

Sri Raghav

Admin