ದೇಶದ ವಿವಿಧೆಡೆ ಕ್ಯಾಬ್ ಪ್ರತಿಭಟನೆ, ಅನೇಕ ರಾಜ್ಯಗಳಲ್ಲಿ ಭುಗಿಲೆದ್ದ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಕೋಲ್ಕತ್ತಾ, ಡಿ.14-ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಸ್ಸೋಂ-ತ್ರಿಪುರಾ ಸೇರಿದಂತೆ ಈಶಾನ್ಯ ಪ್ರಾಂತ್ಯಗಳಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ವಿವಿಧ ರಾಜ್ಯಗಳಿಗೂ ಹಬ್ಬತೊಡಗಿದೆ. ದೆಹಲಿಯಲ್ಲಿ ನಿನ್ನೆಯಿಂದ ಸಿಎಬಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಇಂದೂ ಸಹ ಮುಂದುವರಯಿತು. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ರಾಷ್ಟ್ರ ರಾಜಧಾನಿಯ ಕೆಲವೆಡೆ ಇಂದೂ ಕೂಡ ಪ್ರತಿಭಟನೆ ನಡೆಸಿದವು.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ನಿನ್ನೆ ಈ ವಿಧೇಯಕ ವಿರೋಧಿಸಿ ಜಮೀಯಾ ಮಿಲಿಯಾ ಇಸ್ಲಾಮೀಯ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದು, ಪೊಲೀಸರು ಆಶ್ರುವಾಯು ಪ್ರಯೋಗಿಸಿದರು. ನಂತರ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಂಧಿಸಲಾಯಿತು.

ಪ್ರತಿಭಟನೆ ಮತ್ತು ವಿದ್ಯಾರ್ಥಿಗಳ ಬಂಧನ ಹಿನ್ನೆಲೆಯಲ್ಲಿ ಜಾಮೀಯ ಮಿಲಿಯಾ ಇಸ್ಲಾಮಿಯದ ಎಲ್ಲಾ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮೇಘಾಲಯ ಮತ್ತು ನಾಗಾಲ್ಯಾಂಡ್‍ನಲ್ಲೂ ಕೂಡ ಬಿಗುವಿನ ಪರಿಸ್ಥಿತಿ ಮುಂದುವರೆದಿದ್ದು, ಸೇನೆ ಕಟ್ಟೆಚ್ಚರ ವಹಿಸಿದೆ. ನಾಗಾ ಸ್ಟುಡೆಂಟ್ ಫೆಡರೇಶನ್‍ನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಅವರನ್ನು ಪೊಲೀಸರು ಚದುರಿಸಿದ್ದಾರೆ.

ಅತ್ತ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳಲ್ಲಿ ಮಸೂದೆ ವಿರೋಧಿಸಿ ಇಂದು ಪ್ರತಿಭಟನೆ ಮುಂದುವರೆದು ಹಿಂಸಾಚಾರ ನಡೆದ ವರದಿಗಳಿವೆ. ಮುಶಿರಾಬಾದ್, 24 ಪರಗಣ ಜಿಲ್ಲೆ , ಗ್ರಾಮೀಣ ಹೋರಾ ಪ್ರದೇಶಗಳಲ್ಲಿ ಅನೇಕ ಪ್ರತಿಭಟನಾಕಾರರು ರಸ್ತೆಗಿಳಿದು ವಾಹನ ಮತ್ತು ರೈಲು ಸಂಚಾರಗಳಿಗೆ ಅಡ್ಡಿ ಪಡಿಸಿದರು.  ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು. ಈ ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ.

21 ರಂದು ಬಿಹಾರ್ ಬಂದ್ ಕರೆ:
ಮಸೂದೆಯನ್ನು ವಿರೋಧಿಸಿ ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳ (ಆರ್‍ಜೆಡಿ) ಡಿ.21 ರಂದು ಬಿಹಾರ ಬಂದ್‍ಗೆ ಕರೆ ನೀಡಿದೆ. ಈ ವಿವಾದಾತ್ಮಕ ಮಸೂದೆ ಸಂವಿಧಾನ ವಿರೋಧಿ ಮಸೂದೆಯಾಗಿದ್ದು, ಜನತೆಯ ಹಿತರಕ್ಷಿಸುವ ಉದ್ದೇಶದಿಂದ ಪ್ರತಿಭಟನೆ ದಾಖಲಿಸಲು ಡಿ.21 ರಂದು ಬಂದ್‍ಗೆ ಕರೆ ನೀಡಲಾಗಿದೆ ಎಂದು ಆರ್‍ಜೆಡಿ ತಿಳಿಸಿದೆ.

Facebook Comments