ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ರಾಜ್ಯದಲ್ಲಿ ಜನಜಾಗೃತಿ ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.14- ದೇಶಾದ್ಯಂತ ತೀವ್ರ ವಿವಾದಕ್ಕೆ ಗುರಿಯಾಗಿರುವ ಕೇಂದ್ರ ಸರ್ಕಾರದ ಉದ್ದೇಶಿತ ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ರಾಜ್ಯದಲ್ಲಿ ಜನಜಾಗೃತಿ ಮೂಡಿಸಲು ಅಭಿಯಾನ ಹಮ್ಮಿಕೊಳ್ಳುವಂತೆ ಕೇಂದ್ರ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಈ ಮಸೂದೆಯನ್ನು ವಿರೋಧಿಸಿ ದೇಶದ ನಾನಾ ಭಾಗಗಳಲ್ಲಿ ಪರ, ವಿರೋಧ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಅಭಿಯಾನ ಹಮ್ಮಿಕೊಳ್ಳಬೇಕೆಂದು ರಾಜ್ಯ ನಾಯಕರಿಗೆ ಬಿಜೆಪಿ ರಾಷ್ಟ್ರೀಯ ವರಿಷ್ಠರು ಸಲಹೆ ನೀಡಿದ್ದಾರೆ.

ಮಸೂದೆ ಕುರಿತಂತೆ ಅನಗತ್ಯ ಗೊಂದಲ ಮತ್ತು ವಿವಾದಗಳು ಕೇಳಿಬರುತ್ತಿರುವುದರಿಂದ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಉಂಟಾಗಿದೆ. ಇದನ್ನು ಹೋಗಲಾಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕೆಂಬ ಸೂಚನೆ ಬಂದಿದೆ.  ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ಮಸೂದೆ ಜಾರಿ ಮಾಡಲಾಗಿದೆ ಎಂದು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸಿವೆ. ಇದು ಸಾರ್ವಜನಿಕರಲ್ಲೂ ತಪ್ಪು ಗ್ರಹಿಕೆಗೆ ಕಾರಣವಾಗಿರುವುದರಿಂದ ಕೂಡಲೇ ಸರಿಪಡಿಸುವ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿದ್ದಾರೆ.

ತಜ್ಞರು, ವಿಷಯ ಪಂಡಿತರು, ಆರ್‍ಎಸ್‍ಎಸ್ ಹಿರಿಯ ನಾಯಕರು, ಬಿಜೆಪಿ ನಾಯಕರಿಂದಲೂ ಸರಣಿ ಸಭೆಗಳನ್ನು ನಡೆಸಬೇಕು, ಈ ಹಿಂದೆ ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ ವಿಶೇಷ ಸ್ಥಾನಮಾನ 371ನೇ ವಿಧಿಗೆ ತಿದ್ದುಪಡಿ ಮಾಡಿದ್ದರಿಂದಲೂ ಇದೇ ರೀತಿ ವಿರೋಧ ವ್ಯಕ್ತವಾಗಿತ್ತು.

ದೇಶದ ನಾನಾ ಭಾಗಗಳಲ್ಲಿ ವಿಚಾರ ಸಂಕಿರಣಗಳನ್ನು ಹಮ್ಮಿ ಕೊಳ್ಳುವ ಮೂಲಕ ಗೊಂದಲವನ್ನು ನಿವಾರಿಸಲಾಗಿತ್ತು. ಈಗ ಇದೇ ತಂತ್ರವನ್ನು ಅನುಸರಿಸಲು ಬಿಜೆಪಿ ಮುಂದಾಗಿದೆ. ಶಾಲಾ ಕಾಲೇಜುಗಳು, ಪದವಿ ಪೂರ್ವ, ಪದವಿ ಕಾಲೇಜುಗಳು, ವಿವಿಗಳು, ಗ್ರಾಮಸಭೆ, ಹೋಬಳಿ ಸೇರಿದಂತೆ ಮತ್ತಿತರ ಕಡೆಯೂ ಸಭೆಗಳನ್ನು ನಡೆಸಬೇಕು. ಸಾರ್ವ ಜನಿಕರನ್ನು ಮುಖಾಮುಖಿ ಭೇಟಿಯಾಗಿ ಮಸೂದೆಯನ್ನು ಜಾರಿ ಮಾಡಲಾಗಿದೆ.

ಇದರಿಂದ ಉಂಟಾಗಲಿರುವ ಅನುಕೂಲಗಳು, ಅಕ್ರಮ ವಲಸಿಗರಿಂದ ಉಂಟಾಗುತ್ತಿರುವ ಅನಾನುಕೂಲ ಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ನಾನಾ ರೀತಿಯ ಸಭೆಗಳನ್ನು ಆಯೋಜಿಸಿ ಸಿಎಬಿ ಬಗ್ಗೆ ಸಾರ್ವಜನಿಕರಲ್ಲಿ ಧನಾತ್ಮಕ ಅಂಶ ಮೂಡಿಸಲು ಬಿಜೆಪಿ ಸಜ್ಜಾಗಿದೆ.

ದೇಶದ ನಾನಾ ಭಾಗಗಳಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಹೊರ ಹಾಕುವ ಸದುದ್ದೇಶದಿಂದ ಕೇಂದ್ರ ಸರ್ಕಾರ ನಾಲ್ಕು ದಿನಗಳ ಹಿಂದೆ ಸಂಸತ್‍ನ ಉಭಯ ಸದನಗಳಾದ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಪೌರತ್ವ ಮಸೂದೆಯನ್ನು ಮಂಡನೆ ಮಾಡಿತ್ತು. ಈ ನೂತನ ಮಸೂದೆ ಪ್ರಕಾರ, ದೇಶದ ಪ್ರಜೆ ಎನಿಸಲು ಅರ್ಹತೆ ಪಡೆಯುವವರು ಕೆಲವು ದಾಖಲೆಗಳನ್ನು ಹಾಜರುಪಡಿಸಬೇಕು. ಇಲ್ಲದಿದ್ದರೆ ಅವರ ಪೌರತ್ವ ರದ್ದತಿಯಾಗಿ ದೇಶದಿಂದ ಗಡಿಪಾರು ಮಾಡುವ ಪ್ರಕ್ರಿಯೆ ಇದಾಗಿದೆ.

ಉದ್ದೇಶಿತ ಈ ಮಸೂದೆಗೆ ದೇಶದೆಲ್ಲೆಡೆ ಪರ ವಿರೋಧ ವ್ಯಕ್ತವಾಗಿದೆ. ಕೆಲವರು ಮಸೂದೆ ಪರ ಬೆಂಬಲ ಸೂಚಿಸಿದರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಈಶಾನ್ಯ ರಾಜ್ಯಗಳಲ್ಲಿ ಮಸೂದೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‍ಘಡ, ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ, ಪುದುಚೇರಿಯಲ್ಲಿ ಮಸೂದೆ ಮಂಡನೆಗೆ ಅವಕಾಶ ನೀಡುವುದಿಲ್ಲ ಎಂದು ಸೆಡ್ಡು ಹೊಡೆದಿದ್ದಾರೆ.

ಇನ್ನೊಂದೆಡೆ ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಲ್ಲೂ ನಾವು ಮಸೂದೆಯನ್ನು ಜಾರಿ ಮಾಡುವುದಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿಗಳು ಕೇಂದ್ರಕ್ಕೆ ತಿರುಗೇಟು ನೀಡಿದ್ದಾರೆ.
ಹೀಗಾಗಿ ಬಿಜೆಪಿ ಮಸೂದೆ ಕುರಿತಂತೆ ಜಾಗೃತಿ ಅಭಿಯಾನವನ್ನು ನಡೆಸಲು ಮುಂದಾಗಿದೆ.

Facebook Comments