ಲೋಕಸಭೆಯಲ್ಲಿ ಪೌರತ್ವ ಮಸೂದೆ ಮಂಡನೆ, ಪ್ರತಿಪಕ್ಷಗಳ ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.9- ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ವಿರೋಧದ ನಡುವೆಯೂ ಲೋಕಸಭೆಯಲ್ಲಿಂದು ಗೃಹ ಸಚಿವ ಅಮಿತ್ ಷಾ ಪೌರತ್ವ (ತಿದ್ದುಪಡಿ) ಮಸೂದೆ ಮಂಡಿಸಿದರು. ಪಾಕಿಸ್ತಾನ , ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನಗಳಲ್ಲಿ ಧಾರ್ಮಿಕ ಕಿರುಕುಳ ಮತ್ತು ದೌರ್ಜನ್ಯಗಳಿಂದ ಬೇಸತ್ತು ಭಾರತಕ್ಕೆ ಬಂದಿರುವ ಮುಸ್ಲಿಮೇತರರಿಗೆ ದೇಶದ ಪೌರತ್ವ ನೀಡುವುದು ಈ ಮಸೂದೆಯ ಉದ್ದೇಶವಾಗಿದೆ.

ಲೋಕಸಭೆಯಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆ ಈ ವಿಧೇಯಕ ಮಂಡನೆಯಾಗಿದ್ದು , ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆಯಾಗಲಿದೆ. ಡಿ.31, 2014ರವರೆಗೆ ಪಾಕಿಸ್ತಾನ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಧಾರ್ಮಿಕ ದೌರ್ಜನ್ಯ ಮತ್ತು ಕಿರುಕುಳದಿಂದ ಬೇಸತ್ತು ಭಾರತಕ್ಕೆ ಬಂದಿರುವ ಹಿಂದೂ , ಜೈನ್, ಬೌದ್ಧ , ಸಿಖ್, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದವರೆಗೆ ಭಾರತೀಯ ಪೌರತ್ವ ನೀಡಲು ಈ ಮಸೂದೆ ಉದ್ದೇಶಿಸಿದೆ.

ಭಾರತ ಮತ್ತು ಈಶಾನ್ಯ ಪ್ರಾಂತ್ಯದ ಹಿತಾಸಕ್ತಿ ರಕ್ಷಣೆ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ. ಮಸೂದೆಗೆ ವಿರೋಧ: ಕಾಂಗ್ರೆಸ್ ಸಂಸದ ಶಶಿ ತರೂರ್ ಲೋಕಸಭೆಯಲ್ಲಿಂದು ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವುದಾಗಿ ನೋಟೀಸ್ ಜಾರಿಗೊಳಿಸಿದ್ದಾರೆ. ಈ ವಿಧೇಯಕ ಅಂಗೀಕರಿಸಲ್ಪಟ್ಟರೆ ಸಮಾನತೆಯ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ಆರೋಪಿಸಿದ್ದಾರೆ.

ಕ್ಯಾಬ್ (ಪೌರತ್ವ ತಿದ್ದುಪಡಿ ಮಸೂದೆ): ಕ್ಯಾಬ್ ಮಂಡನೆಯು ಒಲ್ಲದ ಚಾಲಕನೊಂದಿಗೆ ಸವಾರಿ ಮಾಡಿದಂತೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಖ್ಯಾತ ವಕೀಲ ಕಪಿಲ್ ಸಿಬಾಲ್ ಪ್ರತಿಕ್ರಿಯಿಸಿದ್ದಾರೆ.

Facebook Comments