ಭಾಸ್ಕರ್‌ ರಾವ್‌ಗೆ ಗೇಟ್‍ಪಾಸ್..? ಪ್ರವೀಣ್ ಸೂದ್ ನೂತನ ಡಿಜಿ..? ರೇಸ್‌ನಲ್ಲಿ ಕಮಲ್‍ಪಂಥ್‍..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.15- ಶೀಘ್ರದಲ್ಲೇ ಪೊಲೀಸ್ ಇಲಾಖೆಯಲ್ಲಿ ಕೆಲವು ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದ್ದು, ಪೊಲೀಸ್ ಮಹಾನಿರ್ದೇಶಕರಾಗಿ ಪ್ರವೀಣ್‍ಸೂದ್ ನೇಮಕ ಮಾಡಿ ಜೊತೆಗೆ ಬೆಂಗಳೂರುನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್‍ಗೆ ಗೇಟ್ ಪಾಸ್ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಹಾಲಿ ಪೊಲೀಸ್ ಮಹಾನಿರ್ದೇಶಕರಾಗಿರುವ ನೀಲಮಣಿ ಎನ್.ರಾಜು ಈ ತಿಂಗಳ ಅಂತ್ಯಕ್ಕೆ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ತೆರವಾಗಲಿರುವ ಈ ಸ್ಥಾನಕ್ಕೆ ಸಿಐಡಿ ಹಾಗೂ ಆರ್ಥಿಕ ಅಪರಾಧ ವಿಭಾಗದ ಡಿಜಿಪಿ ಪ್ರವೀಣ್‍ಸೂದ್ ಅವರನ್ನು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ನೇಮಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.

ರಾಜಧಾನಿ ಬೆಂಗಳೂರಿನ ಕಾನೂನು ಸುವ್ಯವಸ್ಥೆ ನಿಯಂತ್ರಿಸುವಲ್ಲಿ ವಿಫಲರಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಂಗೆಣ್ಣಿಗೆ ಗುರಿಯಾಗಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ವರ್ಗಾಯಿಸಲು ತೀರ್ಮಾನಿಸಲಾಗಿದೆ. ಭಾಸ್ಕರ್ ರಾವ್ ಅವರ ಸ್ಥಾನಕ್ಕೆ ಗುಪ್ತಚರ ವಿಭಾಗದ ಮುಖ್ಯಸ್ಥ ಕಮಲ್‍ಪಂಥ್ ನೇಮಕವಾಗಲಿದ್ದು, ಗುಪ್ತಚರ ವಿಭಾಗಕ್ಕೆ ಸಿಸಿಬಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇಮಕವಾಗುವ ಸಂಭವವಿದೆ.

ಮಂಗಳೂರಿನಲ್ಲಿ ನಡೆದ ಪೊಲೀಸ್ ಗಲಭೆಯಲ್ಲಿ ವಿರೋಧ ಪಕ್ಷಗಳ ಕೆಂಗೆಣ್ಣಿಗೆ ಗುರಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಆಯುಕ್ತ ಡಾ.ಹರ್ಷ ಅವರನ್ನು ಕೂಡ ವರ್ಗಾವಣೆ ಮಾಡಲು ಸಿಎಂ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ರೀತಿ ಇನ್ನು ಕೆಲವು ಆಯಾಕಟ್ಟಿನ ಹುದ್ದೆಗಳಿಗೆ ದಕ್ಷ ಅಧಿಕಾರಿಗಳನ್ನು ನೇಮಿಸಲು ರಾಜ್ಯ ಸರ್ಕಾರ ಒಲವು ತೋರಿದೆ. ಹಲವು ದಿನಗಳಿಂದ ಒಂದೇ ಸ್ಥಳದಲ್ಲಿ ಠಿಕ್ಕಾಣಿ ಹೂಡಿರುವ ಕೆಲವು ಅಧಿಕಾರಿಗಳನ್ನು ಸ್ಥಾನ ಪಲ್ಲಟ ಮಾಡುವ ಪಟ್ಟಿ ಸಿದ್ದವಾಗಿದೆ ಎಂದು ತಿಳಿದುಬಂದಿದೆ.

# ಸೂದ್‍ಗೆ ಒಲಿದ ಡಿಜಿ ಹುದ್ದೆ?:
ನೀಲಮಣಿ.ಎನ್.ರಾಜು ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಸಿಐಡಿ ವಿಭಾಗದ ಡಿಜಿಪಿ ಪ್ರವೀಣ್‍ಸೂದ್ ಪೊಲೀಸ್ ಇಲಾಖೆಯಲ್ಲೇ ಅತ್ಯುನ್ನತ ಸ್ಥಾನ ಎನಿಸಿದ ಪೊಲೀಸ್ ಮಹಾನಿರ್ದೇಶಕರಾಗುವುದು ಖಚಿತವಾಗಿದೆ. 1986ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಪ್ರವೀಣ್‍ಸೂದ್ 2024 ಮೇ ತಿಂಗಳಿನಲ್ಲಿ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

ಸೇವಾ ಹಿರಿತನವನ್ನು ಪರಿಗಣಿಸುವುದಾದರೆ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ.ಎಂ.ಪ್ರಸಾದ್ ಅವರಿಗೆ ಡಿಜಿ ಹುದ್ದೆ ಒಲಿಯಬೇಕಿತ್ತು. ಆದರೆ 1985ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಎ.ಎಂ.ಪ್ರಸಾದ್ ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸೇವೆಯಿಂದ ನಿವೃತ್ತಿಯಾಗುವರು.

ಡಿಜಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಮತ್ತೋರ್ವ ಐಪಿಎಸ್ ಅಧಿಕಾರಿ ಹಾಗೂ ತರಬೇತಿ ವಿಭಾಗದ ಡಿಜಿಪಿ ಪದಂಕುಮಾರ್ ಗರ್ಗ್ ರೇಸ್‍ನಿಂದ ಹೊರಗುಳಿದಿದ್ದಾರೆ. ಇವರು ಕೂಡ 1986ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದು, 2021 ಏಪ್ರಿಲ್‍ಗೆ ಸೇವೆಯಿಂದ ನಿವೃತ್ತಿಯಾಗುವರು.
ಪ್ರವೀಣ್‍ಸೂದ್ ಅವರ ಅಧಿಕಾರಾವಧಿ ಹೆಚ್ಚಾಗಿರುವುದು ಜೊತೆಗೆ ಮುಖ್ಯಮಂತ್ರಿಗಳ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವುದರಿಂದ ಬಿಜೆಪಿ ವರಿಷ್ಠರು ಕೂಡ ಅವರ ನೇಮಕಕ್ಕೆ ಹಸಿರು ನಿಶಾನೆ ತೋರಿದ್ದಾರೆ.

ಮೂಲತಃ ಹಿಮಾಚಲ ಪ್ರದೇಶದವರಾದ ಪ್ರವೀಣ್‍ಸೂದ್ ತಮ್ಮ ಅಳಿಯ ಮಾಯಂಕ್ ಅಗರವಾಲ್ ಮೂಲಕವೂ ದೆಹಲಿಯ ಪ್ರಮುಖ ನಾಯಕರೊಬ್ಬರ ಮೇಲೆ ಪ್ರಭಾವ ಬೀರಿದ್ದಾರೆಂದು ತಿಳಿದುಬಂದಿದೆ. ಜೊತೆಗೆ ಯಡಿಯೂರಪ್ಪ ಕೂಡ ಸೂದ್ ಅವರನ್ನು ನೇಮಿಸಲು ಒಲವು ತೋರಿದ್ದಾರೆ. ಕೇಂದ್ರ ಗೃಹ ಇಲಾಖೆಗೆ ಕಳುಹಿಸಿಕೊಟ್ಟ ಪಟ್ಟಿಯಲ್ಲಿ ಪ್ರವೀಣ್‍ಸೂದ್, ಗರ್ಗ್ ಮತ್ತು ಎ.ಎಂ.ಪ್ರಸಾದ್ ಹೆಸರುಗಳಿದ್ದವು. ಇದರಲ್ಲಿ ಸೂದ್ ಹೆಸರೇ ಅಂತಿಮವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

# ಭಾಸ್ಕರ್‍ರಾವ್ ಎತ್ತಂಗಡಿ:
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಸದ್ಯದಲ್ಲೇ ಎತ್ತಂಗಡಿಯಾಗಲಿದ್ದಾರೆ. ಭಾರೀ ನಿರೀಕ್ಷೆಯೊಂದಿಗೆ ನಗರ ಪೊಲೀಸ್ ಆಯುಕ್ತರಾಗಿದ್ದ ಅವರು ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಸಾರ್ವಜನಿಕರ ವಿಶ್ವಾಸ ಉಳಿಸಿಕೊಳ್ಳುವಲ್ಲೂ ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹೊಸ ವರ್ಷಾಚರಣೆ ವೇಳೆ ಮಹಿಳೆಯರ ಜೊತೆ ಕೆಲವು ಪುಂಡರು ಅನುಚಿತವಾಗಿ ವರ್ತಿಸಿದ್ದು ಸಿಎಎ ಕಾಯ್ದೆ ವಿರೋಧಿಸಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾದಾಗ ಸೂಕ್ತ ಭದ್ರತೆ ಕೈಗೊಳ್ಳದಿದ್ದು ಸರ್ಕಾರದ ಕೆಂಗೆಣ್ಣಿಗೆ ಗುರಿಯಾಗಿತ್ತು. ಹೀಗೆ ಆಯುಕ್ತರಾಗಿ ವಿಫಲರಾಗಿರುವ ಕಾರಣ ಭಾಸ್ಕರ್‍ರಾವ್ ಅವರನ್ನು ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ಗುಪ್ತಚರ ವಿಭಾಗದ ಮುಖ್ಯಸ್ಥ ಕಮಲ್‍ಪಂಥ್ ಅವರನ್ನು ನೇಮಕ ಮಾಡಲು ಸಿಎಂ ತೀರ್ಮಾನಿಸಿದ್ದಾರೆ.

ಕಮಲ್ ಪಂಥ್ ಈ ಹಿಂದೆ ಶಿವಮೊಗ್ಗದಲ್ಲಿ ಎಸ್‍ಪಿಯಾಗಿ , ಮಂಗಳೂರು ನಗರದಲ್ಲಿ ಆಯುಕ್ತರಾಗಿ ಬೇರೆ ಬೇರೆ ವಿಭಾಗದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸಿರುವ ಅನುಭವವಿದೆ.
ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದೆಂದರೆ ಸವಾಲಿನ ಕೆಲಸವೇ ಸರಿ.

ಹೀಗಾಗಿ ಕಮಲ್ ಪಂತ್ ಅವರನ್ನು ಬೆಂಗಳೂರು ಮಹಾನಗರದ ನೂತನ ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲು ಖುದ್ದು ಯಡಿಯೂರಪ್ಪನವರೇ ಆಸಕ್ತಿ ತೋರಿದ್ದಾರೆ. ಗುಪ್ತಚರ ವಿಭಾಗಕ್ಕೆ ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಬಂದರೆ, ಮಂಗಳೂರು ಮಹಾನಗರದ ನಾಯಕ ಡಾ.ಹರ್ಷ ಸಿಸಿಬಿ ವಿಭಾಗಕ್ಕೆ ಬರುವ ಸಂಭವವಿದೆ.

Facebook Comments

Sri Raghav

Admin