‘ಸುಪ್ರೀಂ’ ಕೂಡ ಆರ್‌ಟಿಐ ವ್ಯಾಪ್ತಿಗೆ..! ಮತ್ತೊಂದು ಮಹತ್ವದ ತೀರ್ಪು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.13-ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಾಧೀಶರ ಕಚೇರಿ ಕೂಡ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಒಳಪಡಲಿದೆ ಎಂದು ವ್ಯಾಖ್ಯಾನಿಸುವ ಮೂಲಕ ಮಹತ್ವದ ತೀರ್ಪು ನೀಡಿರುವ ಸರ್ವೋಚ್ಚ ನ್ಯಾಯಾಲಯ ಸಾಂವಿಧಾನಿಕ ಪೀಠ ಕೆಲವು ಷರತ್ತುಗಳನ್ನೂ ಕೂಡ ಅನ್ವಯಿಸಿದೆ.

ಪಾರದರ್ಶಕತೆ ಕಾಯ್ದುಕೊಳ್ಳಲು ಸಿಜೆಐ ಅವರ ಕಚೇರಿಯನ್ನೂ ಕೂಡ ಆರ್‍ಟಿಐಗೆ ಒಳಪಡಿಸಬೇಕೆಂಬ ದೆಹಲಿ ಹೈಕೋರ್ಟ್‍ನ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಎತ್ತಿಹಿಡಿದಿದೆ. ಹೀಗಾಗಿ ಮುಖ್ಯ ನ್ಯಾಯಮೂರ್ತಿಯವರ ಕಾರ್ಯಾಲಯವೂ ಸಹ ಇನ್ನು ಮುಂದೆ ಆರ್‍ಟಿಐ ವ್ಯಾಪ್ತಿಗೆ ಒಳಪಟ್ಟಂತಾಗಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ 3:2 ಅನುಪಾತದಲ್ಲಿ ತೀರ್ಪನ್ನು ಪ್ರಕಟಿಸಿದೆ.

ಪೀಠದ ಓರ್ವ ನ್ಯಾಯಾಧೀಶರು ಸುಪ್ರೀಂಕೋರ್ಟ್ ನ್ಯಾಯಾಂಗದ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಬೇಕು. ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯನ್ನು ಒಳಪಡಿಸುವುದು ಬೇಡ ಎಂಬ ಅಭಿಪ್ರಾಯ ಹೊಂದಿದ್ದರು. ಆದರೆ ಇಬ್ಬರು ನ್ಯಾಯಾಧೀಶರು ಆರ್‍ಟಿಐ ವ್ಯಾಪ್ತಿಗೆ ಮುಖ್ಯನ್ಯಾಯಾಧೀಶರ ಕಚೇರಿ ಕೂಡ ಬರಬೇಕು ಎಂದು ಅಭಿಪ್ರಾಯಪಟ್ಟಿದ್ದರಿಂದ ತೀರ್ಪು ಪ್ರಕಟಗೊಂಡಿದೆ.

ದೇಶದ ಗೌಪ್ಯತೆಗೆ ಧಕ್ಕೆಯುಂಟು ಮಾಡುವ ವಿಷಯಗಳನ್ನು ಹೊರತುಪಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಾರ್ವಜನಿಕರು ಪಡೆಯಬಹುದೆಂಬ ಉದ್ದೇಶದಿಂದ 2005ರ ಅಕ್ಟೋಬರ್ 12 ರಂದು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಆದರೆ ಸುಪ್ರೀಂಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿಗಳ ಕಚೇರಿ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಟ್ಟಿಲ್ಲ.

ಆದರೆ, ಸಿಜೆಐ ಕಚೇರಿ ಹಾಗೂ ಸುಪ್ರೀಂಕೋರ್ಟ್ ಕೂಡ ಸಾರ್ವಜನಿಕ ಸ್ವಾಮ್ಯಕ್ಕೆ ಸೇರುತ್ತದೆ ಎಂದು ದೆಹಲಿ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸ್ವತಃ ಸುಪ್ರೀಂಕೋರ್ಟ್‍ನ ಪ್ರಧಾನಕಾರ್ಯದರ್ಶಿ ಹಾಗೂ ಕೇಂದ್ರೀಯ ಸಾರ್ವಜನಿಕ ಸಂಪರ್ಕಾಧಿಕಾರಿ ಸರ್ವೋಚ್ಚ ನ್ಯಾಯಾಲಯಕ್ಕೆ 2010ರಲ್ಲಿ ಮೂರು ಅರ್ಜಿ ಸಲ್ಲಿಸಿದ್ದರು.

ಈ ವರ್ಷ ಏಪ್ರಿಲ್‍ನಲ್ಲಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಈ ಕುರಿತ ತೀರ್ಪನ್ನು ಕಾಯ್ದಿರಿಸಿತ್ತು. ಈ ಬಗ್ಗೆ ಕೂಡ ನ್ಯಾ.ರಂಜನ್ ಗೊಗೋಯ್ ನಿವೃತ್ತಿಗೂ ಮುನ್ನ ಮಹತ್ವದ ತೀರ್ಪು ಪ್ರಕಟಿಸಿದರು.

Facebook Comments

Sri Raghav

Admin