ರಂಜನ್ ಗೋಗಯ್ ವಿರುದ್ಧ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ 8- ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕ್ಲೀನ್‍ಚಿಟ್ ಪಡೆದಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ವಿರುದ್ಧ ಕೆಲವು ಕಾರ್ಯಕರ್ತರು  ನಿನ್ನೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಸ್ತ್ರೀ ಸಂಘಟನೆಗಳ ಪರ ಹೋರಾಟ ಮಾಡುವವರು ಸುಪ್ರೀಂಕೋರ್ಟ್ ಆವರಣದ ಒಳಗಡೆ ಕೈಯಲ್ಲಿ ಬಿತ್ತಿಪತ್ರ ಹಿಡಿದು ರಂಜನ್ ಗೋಗಯ್ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಪೊಲೀಸರು ಸುಮಾರು 30ಕ್ಕೂ ಹೆಚ್ಚು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದರು. ಈ ಪ್ರಕರಣದಲ್ಲಿ ನ್ಯಾಯಮೂರ್ತಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿಲ್ಲ. ಮುಖ್ಯನ್ಯಾಯಮೂರ್ತಿ ಎಂಬ ಕಾರಣಕ್ಕಾಗಿ ಅವರಿಗೆ ಕ್ಲೀನ್‍ಚಿಟ್ ನೀಡಲಾಗಿದೆ.

ಯಾವ ನೈತಿಕತೆ ಆಧಾರದ ಮೇಲೆ ಅವರು ಇತರೆ ಪ್ರಕರಣಗಳ ವಿಚಾರಣೆಯನ್ನು ನಡೆಸುತ್ತಾರೆ ಎಂದು ಪ್ರಶ್ನಿಸಿದರು. ನೊಂದ ಮಹಿಳೆ ದೂರು ನೀಡಿದರೆ ಕಡೆ ಪಕ್ಷ ಅವರಿಂದ ಮಾಹಿತಿಯನ್ನೇ ಪಡೆಯಲಿಲ್ಲ. ವಿಚಾರಣೆಗೊಳಪಡಿಸದೆ ಏಕಾಏಕಿ ನ್ಯಾಯಮೂರ್ತಿ ಕ್ಲೀನ್‍ಚಿಟ್ ಕೊಟ್ಟಿರುವುದು ಎಷ್ಟರಮಟ್ಟಿಗೆ ಸರಿ. ಕೂಡಲೇ ಈ ಪ್ರಕರಣದ ಮರುಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದರು.

ಇತರೆ ಪ್ರಕರಣಗಳಲ್ಲಾದರೆ ಮೊದಲು ರಾಜೀನಾಮೆ ಕೊಡುವಂತೆ ಬೇಡಿಕೆಗಳು ಹೆಚ್ಚಾಗುತ್ತವೆ. ದೇಶದ ಅತ್ಯುನ್ನತ ನ್ಯಾಯ ಸ್ಥಾನದಲ್ಲಿರುವ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧವೇ ಇಂತಹ ಆರೋಪಗಳು ಬಂದಾಗ ಆ ಸ್ಥಾನದಲ್ಲಿ ಮುಂದುವರೆಯುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರ ಮೇಲೆ ಮಹಿಳೆಯೊಬ್ಬಳು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ 22ಕ್ಕೂ ಹೆಚ್ಚು ನ್ಯಾಯಮೂರ್ತಿಗಳಿಗೆ ದೂರು ನೀಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‍ನ ಮೂರನೇ ಅತಿ ಹಿರಿಯ ನ್ಯಾಯಮೂರ್ತಿ ಬೋಬ್ಡೆ ಹಾಗೂ ಮಹಿಳಾ ನ್ಯಾಯಮೂರ್ತಿ ಇಂಧು ಮಲ್ಹೋತ್ರ ನೇತೃತ್ವದಲ್ಲಿ ವಿಚಾರಣಾ ಸಮಿತಿಯನ್ನು ರಚಿಸಲಾಗಿತ್ತು.

ನಿನ್ನೆಯಷ್ಟೇ ಸಮಿತಿಯು ವರದಿ ನೀಡಿದ್ದು, ಇದರಲ್ಲಿ ಯಾವುದೇ ರೀತಿಯ ಸತ್ಯಾಂಶ ಇಲ್ಲ ಎನ್ನುವ ಮೂಲಕ ಮುಖ್ಯ ನ್ಯಾಯಮೂರ್ತಿ ಗೋಗಯ್ ಅವರಿಗೆ ಕ್ಲೀನ್‍ಚೀಟ್ ನೀಡಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ