ಸರ್ಕಾರವನ್ನು ಸಂಧಾನಕ್ಕೆ ಆಹ್ವಾನಿಸಿದ ನಕ್ಸಲರು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.6- ಚತ್ತೀಸ್‍ಗಢ ರಾಜ್ಯದ ಬಿಜಾಪುರ ಜಿಲ್ಲೆಯ ನಕ್ಸಲ್ ದಾಳಿಗೆ ಸಂಬಂಧಿಸಿದಂತೆ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋಯಿಸ್ಟ್) ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಭದ್ರತಾ ಸಿಬ್ಬಂದಿ ಒಬ್ಬರು ತಮ್ಮ ವಶದಲ್ಲಿದ್ದಾರೆ. ಅವರನ್ನು ಬಿಡುಗಡೆ ಮಾಡಬೇಕಾದರೆ ಸಂಧಾನಕ್ಕೆ ಬನ್ನಿ ಎಂದು ಸರ್ಕಾರಕ್ಕೆ ಹೇಳಿದೆ.

ಏ.2ರಂದು ನಡೆದ ಬಿಜಾಪುರ ದಾಳಿಯಲ್ಲಿ 24 ಮಂದಿ ಭದ್ರತಾ ಸಿಬ್ಬಂದಿಗಳು ಹತ್ಯೆಯಾಗಿದ್ದರು. 31 ಮಂದಿ ಗಾಯಗೊಂಡಿದ್ದರು. ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ(ಎಂ), ಗುಂಡಿನ ಚಕಮಕಿಯಲ್ಲಿ ನಮ್ಮ ಕಡೆಯ ಗೊರಿಲ್ಲಾ ಆರ್ಮಿಯ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ನಾವು ಸಂಧಾನಕ್ಕೆ ಸಿದ್ದರಿದ್ದೇವೆ. ಸರ್ಕಾರ ಸಂಧಾನಕಾರರ ಹೆಸರನ್ನು ಘೋಷಣೆ ಮಾಡಬೇಕು. ನಮ್ಮ ವಶದಲ್ಲಿರುವ ಭದ್ರತಾ ಸಿಬ್ಬಂದಿಯನ್ನು ಬಿಡುಗಡೆ ಮಾಡಲು ನಾವು ತಯಾರು ಎಂದಿರುವ ಲಿಬರೇಷನ್ ಗೊರಿಲ್ಲಾ ಆರ್ಮಿಯ ಪತ್ರಿಕಾ ಹೇಳಿಕೆಯಲ್ಲಿ ಪೊಲೀಸರು, ಯೋಧರು ನಮ್ಮ ಶತ್ರುಗಳಲ್ಲ ಎಂದು ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರ ಪ್ಯಾಸಿಸ್ಟ್ ಧೋರಣೆಯನ್ನು ಅನುಸರಿಸುತ್ತಿದೆ. ವಿದೇಶಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಅನ್ನ, ನೀರು ಕೇಳುವ ಜನರ ಹಕ್ಕನ್ನು ಧಮನ ಮಾಡುತ್ತಿದೆ. 2000 ಭದ್ರತಾ ಸಿಬ್ಬಂದಿಗಳ ಪಡೆಯನ್ನು ರಚನೆ ಮಾಡಿ ಯುದ್ದ ಸಾರಿದೆ ಎಂದು ಆರೋಪಿಸಲಾಗಿದೆ.

2020ರ ನವೆಂಬರ್‍ನಿಂದ ಆರಂಭಗೊಂಡ ಕಾರ್ಯಾಚರಣೆಯಲ್ಲಿ ಈವರೆಗೂ 150ಕ್ಕೂ ಹೆಚ್ಚು ಗ್ರಾಮೀಣ ಜನರನ್ನು ಕೊಲ್ಲಲಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸೇರಿದಂತೆ ಸಾವಿರಾರು ಮಂದಿಯನ್ನು ಜೈಲಿನಲ್ಲಿಡಲಾಗಿದೆ. ಮಹಿಳೆಯರು, ಮಕ್ಕಳು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಅಸಹಾಯಕ ಜನರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಸಂಪತ್ತು ಲೂಟಿ ಮಾಡಲಾಗುತ್ತಿದೆ. ನಾಗರಿಕ ಸೌಲಭ್ಯಗಳಾದ ಶಾಲೆ, ಆಸ್ಪತ್ರೆಗಳನ್ನು ತೆಗೆದು ಹಾಕಲು ಸೂಚನೆ ನೀಡಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಬಾಡಿಗೆ ಪೊಲೀಸರನ್ನು ಮುಂದಿಟ್ಟುಕೊಂಡು ಹತ್ಯಾಕಾಂಡ ನಡೆಸುವುದನ್ನು ನಾವು ಖಂಡಿಸುತ್ತೇವೆ. ಸರ್ಕಾರ ಮಿಲಟರಿ ಕಾರ್ಯಾಚರಣೆನ್ನು ಮುಂದುವರೆಸಿದರೆ ಅದರಿಂದ ಆಗುವ ಅನಾಹುತಗಳಿಗೆ ಸರ್ಕಾರವೇ ಜವಾಬ್ದಾರಿಯಬೇಕಾಗುತ್ತದೆ ಎಂದು ಸಿಪಿಐ (ಎಂ) ಎಚ್ಚರಿಕೆ ನೀಡಿದೆ.

Facebook Comments