“ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು BSY ಕನಸು ನನಸು ಮಾಡುತ್ತೇವೆ”

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ,ಆ.16- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಯಡಿಯೂರಪ್ಪನವರ ಕನಸು ನನಸು ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ತರುವುದು ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಕನಸು. ಹಾಗಾಗಿ ಪಕ್ಷವನ್ನು ಸಂಘಟಿಸುತ್ತಿದ್ದೇವೆ ಎಂದರು.

ರಾಜ್ಯದ ಉಪಾಧ್ಯಕ್ಷನಾಗಿ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾವು ಮಾಡುವ ಕೆಲಸವನ್ನು ಜನರು ಗುರುತಿಸಬೇಕೇ ಹೊರತು, ನಾವಾಗಿಯೇ ಮಂತ್ರಿಯಾಗಬೇಕು, ರಾಜ್ಯಾಧ್ಯಕ್ಷನಾಗಬೇಕು ಎನ್ನಬಾರದು. ನಮ್ಮದು ರಾಷ್ಟ್ರೀಯ ಪಕ್ಷ, ಪ್ರಾದೇಶಿಕ ಪಕ್ಷವಲ್ಲ. ಹಾಗಾಗಿ ಯಾವಾಗ ಯಾವ ಜವಾಬ್ದಾರಿ ಕೊಡಬೇಕು ಎಂದು ಪಕ್ಷದ ಮುಖಂಡರು ತೀರ್ಮಾನ ಮಾಡುತ್ತಾರೆ ಎನ್ನುವ ಮೂಲಕ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಯಾಗುತ್ತಾರೆ ಎನ್ನುವ ಊಹಾಪೋಹಗಳಿಗೆ ತೆರೆ ಎಳೆದರು.

ಉಪಾಧ್ಯಕ್ಷನಾಗಿ ರಾಜ್ಯದುದ್ದಗಲಕ್ಕೂ ಪ್ರವಾಸ ಮಾಡಬೇಕಾಗುತ್ತದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಒತ್ತು ಕೊಡಬೇಕು ಎನ್ನುವ ಅಪೇಕ್ಷೆಯಿದೆ. ಆ ಭಾಗದಲ್ಲಿ ಪಕ್ಷವನ್ನು ಗಟ್ಟಿಗೊಳಿಸಬೇಕಾಗಿದೆ. ಹಾಗಾಗಿ ನಾನು ಆ ಭಾಗದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೇನೆ ಎಂದರು.

ಇನ್ನು ವಾಜಪೇಯಿ ಬಗ್ಗೆ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆ ಕುರಿತು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೇಳಿಕೆ ಕೊಡುವ ಮೂಲಕ ನಾಯಕತ್ವ ಬೆಳೆದು ಬಿಡುತ್ತದೆ ಎನ್ನುವ ಭ್ರಮೆಯಲ್ಲಿ ಕೆಲವರು ಇದ್ದಾರೆ. ಹೀಗೆ ವಾಜಪೇಯಿ ಬಗ್ಗೆ ಮಾತನಾಡುವುದು ಯಾವುದೇ ಪಕ್ಷದವರಿಗೆ ಶೋಭೆ ತರುವುದಿಲ್ಲ.

ಯಾವುದೇ ಹೇಳಿಕೆಗಳಿಂದ ನಾಯಕರಾಗಲು ಸಾಧ್ಯವಿಲ್ಲ, ಜನಪರ ಕೆಲಸ ಮಾಡುವ ಮೂಲಕ ಸಂಘಟನೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಈ ಬಗ್ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಮುಂದೇನಾಗುತ್ತೆ ನೋಡೋಣ ಎಂದರು.

Facebook Comments