ಕೊರೋನಾದಿಂದ ಗುಣಮುಖರಾದವರಿಗೆ ಮತ್ತೆ ಪಾಸಿಟಿವ್, “ಕ್ಲಿನಿಕಲ್ ಸ್ಟಡಿ” ನಡೆಸಿ ವರದಿ ನೀಡುವಂತೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕೊರೋನಾದಿಂದ ಗುಣಮುಖರಾದವರಿಗೆ ಮತ್ತೊಮ್ಮೆ ಕೊರೋನಾ ಕಾಣಿಸಿಕೊಳ್ಳುತ್ತಿರುವ ಪ್ರಕರಣದ ಬಗ್ಗೆ “ಕ್ಲಿನಿಕಲ್ ಸ್ಟಡಿ” ನಡೆಸಿ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಂದು ವಿಧಾನಸೌಧದ ಕೊಠಡಿಯಲ್ಲಿ ಕೋವಿಡ್-19 ಟೆಸ್ಟಿಂಗ್ ಕುರಿತು ಟಾಸ್ಕ್‌ ಫೋರ್ಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಫೋರ್ಟಿಸ್‌ನಲ್ಲಿ ಕೋರೋನದಿಂದ ಗುಣಮುಖರಾದ‌ 27 ವರ್ಷದ ಮಹಿಳೆಗೆ ಮತ್ತೊಮ್ಮೆ ಕೊರೋನಾ ಪಾಸಿಟಿವ್ ಬಂದಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಇತರೆ ರಾಷ್ಟ್ರಗಳಲ್ಲಿ ಈ ರೀತಿಯ ಪ್ರಕರಣಗಳು ಕಂಡು ಬಂದಿವೆ.

ಇದಕ್ಕೆ ಒಂದೊಂದು ದೇಶದಲ್ಲೂ ಒಂದೊಂದು ರೀತಿ ಕಾರಣ ಕೇಳಿ ಬಂದಿವೆ. ಬೆಂಗಳೂರಿನಲ್ಲಿ ಇಂಥ ಪ್ರಕರಣ ಬೆಳಕಿಗೆ ಬಂದಿರುವುದು ಆತಂಕದ ವಿಷಯ. ಆದರೆ, ಇದನ್ನು ಸೂಕ್ಷ್ಮ ರೀತಿಯಲ್ಲಿ ನಿರ್ವಹಿಸುವ ಮೂಲಕ ಜನರಲ್ಲಿ ಮತ್ತೊಮ್ಮೆ ಕೊರೋನ ಬಾಧಿಸುವ ಆತಂಕ ದೂರ ಮಾಡಬೇಕು ಎಂದರು.

ಕೋವಿಡ್‌ ಬಂದ ವ್ಯಕ್ತಿಯು ಗುಣಮುಖನಾದ ಮೇಲೆ ದೇಹದಲ್ಲಿ ಬಿಳಿರಕ್ತ ಕಣಗಳ ಮರು ಉತ್ಪಾದನೆಗೆ ಕನಿಷ್ಠ 15 ದಿನಗಳ ಸಮಯ ತೆಗೆದುಕೊಳ್ಳುತ್ತದೆ. ಈ ಕಾರಣದಿಂದ ಕೆಲವರಿಗೆ ಕೊರೋನ ಮತ್ತೊಮ್ಮೆ ಬಾಧಿಸುವ ಸಾಧ್ಯತೆಗಳಿವೆ. ಆದರೆ ಇದೇ ಕಾರಣ ಎಂದು ಸ್ಪಷ್ಟವಾಗಿ ಹೇಳಲಾಗದು‌ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮತ್ತೊಮ್ಮೆ ಕೊರೋನ ಬರಲು ಕಾರಣ ಏನೆಂಬುದರ ಬಗ್ಗೆ ನಿಖರತೆ ಬೇಕು. ಜೊತೆಗೆ ಇತರೆ ರಾಜ್ಯಗಳಲ್ಲಿ ಇಂಥ ವಿಶೇಷ ಪ್ರಕರಣಗಳಲ್ಲಿ ತೆಗೆದುಕೊಳ್ಳುತ್ತಿರುವ ಚಿಕಿತ್ಸಾ ಕ್ರಮದ ಬಗ್ಗೆ ಶೀಘ್ರವೇ ವರದಿ ಸಲ್ಲಿಸುವಂತೆ ಸೂಚಿಸಿದರು.

ಅಷ್ಟೆ ಅಲ್ಲದೆ, ಕೋವಿಡ್‌ನಿಂದ ಗುಣಮುಖರಾದವರ ಮೇಲೆ ಯಾವ ರೀತಿ ನಿಗಾ ವಹಿಸಲಾಗುತ್ತಿದೆ? ಅವರು ತೆಗೆದುಕೊಳ್ಳಬೇಕಾದ ಎಚ್ಚರಿಕೆ, ಅನುಸರಿಸ ಬೇಕಾದ ಜೀವನ ಕ್ರಮದ ಬಗ್ಗೆ ಯಾವ ರೀತಿ ಅರಿವು ಮೂಡಿಸಲಾಗಿದೆ ಎಂದು ಪ್ರಶ್ನಿಸಿದರು.

ನಗರಾಭಿವೃದ್ಧಿ ಸಚಿವರಿಗೆ ಬೂತ್‌ಲೆವೆಲ್ ಕಮಿಟಿ ಜವಾಬ್ದಾರಿ :
ಕೋವಿಡ್ ನಿಯಂತ್ರಣ ಬೂತ್‌ಮಟ್ಟದಿಂದ‌ ಮಾತ್ರ ಸಾಧ್ಯ ಎಂಬುದನ್ನು‌ ಮೊದಲಿಂದ ಪ್ರತಿಪಾದಿಸಿದ್ದೇನೆ.

ಬೂತ್ ಮಟ್ಟದಲ್ಲಿ‌ ಸಮಿತಿ ರಚಿಸಿ, ಜಾಗೃತಿ ಮೂಡಿಸುವುದು ಹಾಗೂ ಕೊರೋನ ಪರೀಕ್ಷೆ ನಡೆಸುವುದರಿಂದ ಸುಲಭ ರೀತಿಯಲ್ಲಿ ನಿಯಂತ್ರಣ ಸಾಧ್ಯ. ಈ ಜವಾಬ್ದಾರಿಯನ್ನು ನಗರಾಭಿವೃದ್ಧಿ ಸಚಿವರಿಗೆ ವಹಿಸಿದರೆ ಇದರ ನಿರ್ವಹಣೆ ಸುಲಭ ಎಂಬ ಅಭಿಪ್ರಾಯ ಹೊರಹಾಕಿದರು.

Facebook Comments

Sri Raghav

Admin