ನ್ಯೂಯಾರ್ಕ್‍ನಲ್ಲಿ ತೆರೆದಿದ್ದ ಶಾಲೆ ಮತ್ತೆ ಬಂದ್, 10 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ನ.19-ಅಮೆರಿಕದಲ್ಲಿ ಡೆಡ್ಲಿ ಕೊರೊನಾ ವೈರಸ್ ದಾಳಿಯ ಎರಡನೇ ಅಲೆಯಿಂದ ಎಲ್ಲವೂ ಆಯೋಮಯವಾಗಿದೆ. ಶಿಕ್ಷಣ ಕ್ಷೇತ್ರವೂ ಸಹ ಇದಕ್ಕೆ ಹೊರತಾಗಿಲ್ಲ.  ಗಗನಚುಂಬಿ ನಗರಿ ನ್ಯೂಯಾರ್ಕ್‍ನಲ್ಲಿ ಕೋವಿಡ್-19 ವೈರಸ್ ಹಾವಳಿಯ ನಡುವೆಯೂ ಆರಂಭಗೊಂಡಿದ್ದ ಶಾಲೆಗಳು ಮತ್ತೆ ಹೆಮ್ಮಾರಿ ಆರ್ಭಟದಿಂದ ಮುಚ್ಚಲ್ಪಟ್ಟಿವೆ. ಇದರಿಂದಾಗಿ 10 ಲಕ್ಷಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯ ಅತಂತ್ರವಾಗಿದ್ದು, ಆನ್‍ಲೈನ್ ಎಜುಕೇಷನ್‍ಗೆ ಮೊರೆ ಹೋಗುವಂತಾಗಿದೆ.

ನ್ಯೂಯಾರ್ಕ್‍ನಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಪುನಾರಂಭಿಸಬೇಕೆಂಬ ಸದುದ್ದೇಶದಿಂದ ನಗರಾಡಳಿತ ಕೈಗೊಂಡಿದ್ದ ಯೋಜನೆ ಸಂಪೂರ್ಣ ವಿಫಲವಾಗಿದೆ. ಕೊರೊನಾ ಹಾವಳಿ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವುದರಿಂದ ಅನೇಕ ಶಾಲೆಗಳು ಮತ್ತು ಪ್ರಾಥಮಿಕ ಹಂತದ ಶಿಕ್ಷಣ ಸಂಸ್ಥೆಗಳಿಗೆ ಮತ್ತೆ ಬೀಗಮುದ್ರೆ ಬಿದ್ದಿದೆ. ತೆರೆಯಲ್ಪಟ್ಟಿದ್ದ ಶಾಲೆಗಳಲ್ಲಿ ಮತ್ತೆ ಸೋಂಕು ಪ್ರಕರಣಗಳು ಹೆಚ್ಚಾದ ಕಾರಣ ಶಿಕ್ಷಣ ಸಂಸ್ಥೆಗಳನ್ನು ಪುನ: ಬಂದ್ ಮಾಡಲಾಗಿದೆ.

ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ನ್ಯೂಯಾರ್ಕ್ ಮೇಯರ್ ಬಿಲ್ ಡಿ ಬ್ಲಾಸಿಯೋ, ಕೋವಿಡ್ ವೈರಸ್ ಪಿಡುಗು ಮತ್ತೆ ಹೆಚ್ಚಾಗಿದೆ. ಹೀಗಾಗಿ ನಾವು ಶಾಲೆಗಳನ್ನು ಬಂದ್ ಮಾಡುವುದು ಅನಿವಾರ್ಯವಾಗಿದೆ ಎಂದು ವಿಷಾದಿಸಿದರು. ಈ ಪಿಡುಗಿನಿಂದಾಗಿ ದೇಶದ ಅತ್ಯಂತ ಬೃಹತ್ ಸಾರ್ವಜನಿಕ ಶಾಲಾ ಶಿಕ್ಷಣ ಕಲಿಕಾ ವ್ಯವಸ್ಥೆಗೆ ಮತ್ತೆ ಅಡ್ಡಿಯಾಗಿದೆ. ಈಗ ಮತ್ತೆ 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಆನ್‍ಲೈನ್ ಶಿಕ್ಷಣಕ್ಕೆ ಮತ್ತೆ ಮೊರೆ ಹೋಗಿದ್ದಾರೆ ಎಂದು ಮೇಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾವು ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಶಿಕ್ಷಣ ವ್ಯವಸ್ಥೆ ಕಲ್ಪಿಸಿ ಮಕ್ಕಳಿಗೆ ಸೋಂಕು ಪರೀಕ್ಷೆ ಸೇರಿದಂತೆ ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವು. ಆದರೂ ಸೋಂಕು ಪ್ರಕರಣಗಳು ಪುನರಾವರ್ತಿತವಾಗುತ್ತಿವೆ. ಹೀಗಾಗಿ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಬಿಲ್ ಡಿ ಬ್ಲಾಸಿಯೋ ಹೇಳಿದರು. ಅಮೆರಿಕದಲ್ಲಿ ಕಳೆದ ಒಂದು ವಾರದಿಂದ ಸೋಂಕು, ಸಾವು ಮತ್ತು ಸಕ್ರಿಯ ಪ್ರಕರಣಗಳಲ್ಲಿ ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗಿದೆ.

ಮೊನ್ನೆ ಒಂದೇ ದಿನ ದೇಸದಲ್ಲಿ 1.77 ಲಕ್ಷ ದಿನನಿತ್ಯದ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ವಿಶ್ವದಲ್ಲೇ ಅತ್ಯಂತ ಹೆಚ್ಚು ಸೋಂಕು ಮತ್ತು ಸಾವು ಪ್ರಕರಣ ವರದಿಯಾಗಿರುವ ಅಮೆರಿಕದಲ್ಲಿ ಅತಿ ಹೆಚ್ಚು ಕೇಸ್‍ಗಳು ನ್ಯೂಯಾರ್ಕ್‍ನಲ್ಲೇ ಪತ್ತೆಯಾಗಿವೆ.

Facebook Comments